February 2026


ಸಂಪಾದಕರ ಬರಹ 

ನಿಮ್ಮೆಲ್ಲರ ಸಲಹೆಯಂತೆ, ಪ್ರತಿಭಾ ಪತ್ರಿಕೆಗೆ ಅನೇಕ ವಿಭಾಗಗಳನ್ನು, ಹಂತ ಹಂತವಾಗಿ ಸೇರಿಸಲಾಗುವುದು. 

ಈ ಪತ್ರಿಕೆ ಓದುವುದು ಹೇಗೆ ?

ಪ್ರತಿ ವಿಭಾಗವನ್ನೂ  ಕ್ಲಿಕ್ ಮಾಡಿ, ಆ ವಿಭಾಗಕ್ಕೆ ಹೋಗಿ ಓಡಿದನಂತರ, ಆ ವಿಭಾಗದ ಕೊನೆಯಲ್ಲಿ ಕಾಣುವ " ಮತ್ತೆ ಮುಖಪುಟಕ್ಕೆ " ಲಿಂಕ್ ಒತ್ತಿ , ಮುಖಪುಟಕ್ಕೆ ಬಂದ ನಂತರ, ಇನ್ನೊಂದು ವಿಭಾಗಕ್ಕೆ  ಅದೇ ರೀತಿ ಹೋಗಬಹುದು. 

ಎಲ್ಲಾ ಸ್ಪರ್ಧೆಗಳೂ ಸ್ಪರ್ಧಾ ವಿಭಾಗದಲ್ಲಿ ಬರುತ್ತವೆ. ಕಥೆಯಲ್ಲಿ ಪ ಪ್ರಶ್ನೆ ಕೇಳಿದ್ದರೂ , ಅದೂ ಸ್ಪರ್ಧಾ ವಿಭಾಗದಲ್ಲಿರುತ್ತದೆ. ಒಂದು ಸ್ಪರ್ಧೆಗೆ ಮಾತ್ರ ಬಹುಮಾನ ಇರುತ್ತದೆ. ಆದನ್ನು  ಬಹುಮಾನಿತ  ಸ್ಪರ್ಧೆ ಎಂದು ಹಾಕಲಾಗುತ್ತದೆ . ಮುಂದೆ, ಇನ್ನೂ  ಅನೇಕ ವಿಭಾಗಗಳನ್ನು ಸೇರಿಸಲಾಗುತ್ತದೆ.

ಉತ್ತಮಸಲಹೆಗಳನ್ನು ಕೊಟ್ಟ ನಿಮ್ಮೆಲ್ಲರೆಗೂ  ಧನ್ಯವಾದಗಳು. 

ಈ ಸಂಚಿಕೆಯಲ್ಲಿನ  ವಿವಿಧ ವಿಭಾಗಗಳು : ಈ ಕೆಳಗಿನ  ಲಿಂಕ್ ಗಳನ್ನು ಒತ್ತಿ , ಆ ವಿಭಾಗಗಳಿಗೆ ಹೂಗಬಹುದು 

   ಸ್ಪರ್ಧಾ ವಿಭಾಗಕ್ಕೆ -->

   ವ್ಯಕ್ತಿ ಪರಿಚಯಕ್ಕೆ  - ಕುಮಾರಿ ದಿಶಾ ಪುರಾಣಿಕ್  -->

 ಆಧ್ಯಾತ್ಮ ವಿಭಾಗಕ್ಕೆ  -->

 ಕಥೆ- ಕವನ .. ವಿಭಾಗಕ್ಕೆ  -->

  ಚಿತ್ರ ಕಲಾ ವಿಭಾಗಕ್ಕೆ -->

 

     ಸುದ್ದಿ ವಿಭಾಗಕ್ಕೆ -->


ಸ್ಪರ್ಧಾ ವಿಭಾಗ - ಫೆಬ್ರವರಿ-2026

ಈ ಸಂಚಿಕೆಯ ಬಹುಮಾನಿತ ಸ್ಪರ್ಧೆ -

   "  ಜೀವನದಲ್ಲಿ ನಾವು ಎಷ್ಟು ದುಡಿಯಬೇಕು ? "

ಕೆಲವರು 8 ಗಂಟೆ, 12 ಗಂಟೆ, 16 ಗಂಟೆ ದುಡಿದರೆ, ಮತ್ತೆ ಕೆಲವರು ಕೇವಲ 4 ರಿಂದ 5ಗಂಟೆ ದುಡಿಯುವರು

 ಈ ವಿಷಯದ ಬಗ್ಗೆ  30 ರಿಂದ 40 ಸಾಲು ಬರೆದು ಕಳಿಸಿ. ಉತ್ತಮ ಬರಹಕ್ಕೆ ಬಹುಮಾನ.

 
 

ಇತರ ಸ್ಪರ್ಧೆಗಳು 

1. ಶಾಲಿನಿಯ  ಶಾಲು

ಲೇಖಕರು : ಶ್ರೀಮತಿ ಪದ್ಮ ಆರಾಧ್ಯ 

 ಒಂದೂರಿನಲ್ಲಿ ಒಂದು ವಠಾರದಲ್ಲಿ ಒಬ್ಬಳು ಶಾಲಿನಿಯ ಎಂಬ ಅಧ್ಯಾಪಕಿ ಇದ್ದಳು ಅವಳು ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದಾಗಲಿಲ್ಲ ಒಂದು ನೀಲಿ ಬಣ್ಣದ ಶಾಲನ್ನು ಹೊಂದಿಕೊಂಡು ಹೋಗುತ್ತಿದ್ದಳು ಒಂದು ದಿನವೂ ಶಾಲಿ ಇಲ್ಲದೆ ಹೊರಗೆ ಹೋಗುತ್ತಿರಲಿಲ್ಲ ಕೇಳಿದವರಿಗೆಲ್ಲ ಏನು ಹೇಳದೆ ಸುಮ್ಮನಿರುತ್ತಿದ್ದಳು ಜನರು ಏನಿದರ ಮರ್ಮ ಏನು ಇದೆ ಎಂದು ಕುತೂಹಲದಿಂದ ಯೋಚಿಸುತ್ತಿದ್ದರು . ಹಾಗಾದರೆ ಏನಿರಬಹುದು ಊಹಿಸಿ ನಿಮ್ಮ ಊಹೆಗೆ ನಿಲುಕಿದ ಉತ್ತರವನ್ನು ತಿಳಿಸಿ.

2. ಈ ಪದ್ಯದ ಅರ್ಥ ತಿಳಿಸಿ.

ಲೇಖಕರು : ಶ್ರೀ ಸುಬ್ಬಣ ಆರಾಧ್ಯ 

ಅಶನದಲ್ಲಿ ಶೂರ|

ದಿಶನದಲ್ಲಿ ಧೀರ ||

ನಿದ್ರೆಯಲ್ಲಿ ಕುಂಭಕರ್ಣ|

ಬರಹದಲ್ಲಿ ಬಂಡೆಗಲ್ಲು ||

ಇದರ ಅರ್ಥ ತಿಳಿಸಿ

 
 

ಕಳೆದ ತಿಂಗಳ ಸ್ಪರ್ಧೆಯ ಉತ್ತರಗಳು 

ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯ ನಾರಾಯಣ ರಾವ್ 

 ನನಗೆ ಈಗ 82 ವರ್ಷ ಹಿಂದಿನ ನನ್ನ ಅನುಭವದ ಒಂದೆರಡು ಮಾತು. ನಾಲ್ಕು ಜನ ಅಣ್ಣ ತಮ್ಮಂದಿರ ಮನೆಯವರು, ಗೌರಿ ಗಣೇಶ ಹಬ್ಬವನ್ನು ಐವತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಒಟ್ಟಿಗೆ ಆಚರಿಸುತ್ತಿದ್ದೆವು. ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ಇದ್ದರೂ ಸಹ, ಎಲ್ಲರೂ ಮೂರು ದಿನ ಮುಂಚಿತವಾಗಿ ಬಂದು ಒಟ್ಟಿಗೆ ಹಬ್ಬ ಆಚರಿಸುತ್ತಿದ್ದೆವು. ಕೆಲವು ವರ್ಷಗಳು ಕಳೆದಂತೆ ಎಲ್ಲಾ ಅಣ್ಣ-ತಮ್ಮಂದಿರ ಮನೆಗಳಲ್ಲೂ ಅವರವರ ಸೊಸೆಯಂದಿರು ಮೊಮ್ಮಕ್ಕಳು ಎಲ್ಲಾ ಸೇರಿ 30 ರಿಂದ 40 ಜನರು ಒಟ್ಟಿಗೆ ಪೂಜೆ ಮಾಡುತ್ತಿದ್ದೆವು. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ಅಲಂಕರಿಸಿಕೊಂಡು ಪೂಜೆಗೆ ಕುಳಿತು ಕೊಳ್ಳುತ್ತಿದ್ದರೆ ನೋಡಲು ತುಂಬಾ ಸಂತೋಷವಾಗುತ್ತಿತ್ತು. ಗಣೇಶ ಹಬ್ಬದ ದಿನ ಚಿಕ್ಕ ಚಿಕ್ಕ ಹುಡುಗರೆಲ್ಲ ಪಂಚೆ ಶಲ್ಯ ಹುಟ್ಟುಕೊಂಡು ಪೂಜೆಗೆ ಕುಳಿತಿರುತ್ತಿದ್ದರು .ಆಗ ಯಾರ ಕೈಯಲ್ಲಿ ಮೊಬೈಲುಇರಲಿಲ್ಲ.( ಆಗ ಇನ್ನೂ ಮೊಬೈಲು ಬಂದಿರಲೇ ಇಲ್ಲ )  ಬದಲಾಗಿ ಹೂವು ಅಕ್ಷತೆ ಕೈಯಲ್ಲಿ ಹಿಡಿದು ಕುಳಿತಿರುತ್ತಿದ್ದರು.

 ಭಕ್ತಿಯಿಂದ ಎಲ್ಲರೂ ಪೂಜೆ ಮಾಡುವುದು, ಮಂತ್ರ ಘೋಷಣೆ ಎಲ್ಲ ತುಂಬಾ ಚೆನ್ನಾಗಿ ಇರುತ್ತಿತ್ತು. ಎಲ್ಲರೂ ಒಟ್ಟಿಗೆ ಕುಳಿತು ಬಾಳೆ ಎಲೆ ಊಟ ಮಾಡುವುದು , ಹಬ್ಬದ ಸಡಗರ ಸಂಭ್ರಮ ಎಲ್ಲಾ ಚೆನ್ನಾಗಿರುತಿತ್ತು .ಹಬ್ಬಕ್ಕೆ ನಾವೇ ಅಡಿಗೆಯನ್ನು ತಯಾರಿಸುತ್ತಿದ್ದೆವು

 ಇನ್ನೊಂದು ವಿಷಯ

 ಸ್ವತಂತ್ರ ದಿನಾಚರಣೆ ,ಗಣರಾಜ್ಯೋತ್ಸವ ಆಚರಣೆಗಳಲ್ಲಿ , ಧ್ವಜಾರೋಹಣ ಕಾರ್ಯಕ್ರಮ ನಮ್ಮ ಮನೆಯಲ್ಲಿಯೇ ನಡೆಯುತ್ತಿತ್ತು. ನನ್ನ ಮೈದುನ ಒಬ್ಬರು ಈ ಕಾರ್ಯಕ್ರಮವನ್ನು ಮನೆಯಲ್ಲಿ ನಡೆಸುತ್ತಿದ್ದರು. ಮನೆಯಲ್ಲಿ ಅವರ ಮಕ್ಕಳು, ನಮ್ಮ ಮಕ್ಕಳು, ರಜಕೆಂದು ಯಾರಾದರೂ ಬಂದಿದ್ದರೆ ಅವರ ಮಕ್ಕಳು ಎಲ್ಲರೂ ಸೇರಿ ಬಾವುಟ ಹಾರಿಸುತ್ತಿದ್ದರು . ಮಕ್ಕಳ ಕೈಯಿಂದಲೇ ಬಾವುಟ ತಯಾರು ಮಾಡಿಸಿ, ಜೊತೆಗೆ ಅವರು ಮಕ್ಕಳೊಂದಿಗೆ ಕುಳಿತು ಎಲ್ಲಾ ವ್ಯವಸ್ಥೆಯನ್ನು ಹಿಂದಿನ ದಿನವೇ ಮಾಡಿರುತ್ತಿದ್ದರು. 

ನಮ್ಮ ಮನೆಯ ಹಾಲಿನಲ್ಲಿ ಒಂದು ದೊಡ್ಡ ಕಪಾಟು ಇತ್ತು. ಗೂಡೆಗೇ  ಅದರ ಬಾಗಿಲಿತ್ತು . ಅದರ ಬಾಗಿಲ ಚಿಲಕಕ್ಕೆ ದಾರ ಕಟ್ಟಿ ಎಳೆದರೆ, ಬಾವುಟ ಮೇಲೆ ಹೋಗುವ ಹಾಗೆ ಹಿಂದಿನ ದಿನ ರಾತ್ರಿ ಸಿದ್ಧ ಮಾಡಿರುತ್ತಿದ್ದರು. ಬೆಳಗ್ಗೆ ಬೇಗ ಎದ್ದು, ಸಂಭ್ರಮದಿಂದ ಆಚರಿಸುತ್ತಿದ್ದರು. ಎಲ್ಲಾ ಹುಡುಗರು, ಮಹಾತ್ಮ ಗಾಂಧೀಜಿ ಜೀ ಕಿ ಜೈ , ಭಾರತ್ ಮಾತಾ ಕಿ ಜೈ ಎಂದು ಮೂರು ಸಲ ಕೂಗಿ, ಚಪ್ಪಾಳೆ ಹೊಡೆಯುತ್ತಿದ್ದರು . ತಿನ್ನಲು ಪುರಿ ಬಿಸ್ಕತ್ ಇತ್ಯಾದಿಗಳನ್ನು ತಂದಿರುತ್ತಿದ್ದರು. ಎಲ್ಲರಿಗೂ ಕೊಟ್ಟು ಅವರುಗಳೂ  ತಿಂದು ಸಂತೋಷದಿಂದ ಕುಣಿದಾಡುತ್ತಿದ್ದರು . ಇದು ಐವತ್ತು ವರ್ಷದ ಹಿಂದಿನ ಮಾತು. ಈ  ವಿಷಯ ಮತ್ತು ಗೌರಿ ಗಣೇಶ ಹಬ್ಬಗಳನ್ನು ಮರೆಯುವಂತೆಯೇ ಇಲ್ಲ.

 ಈಗಿನ ಕಾಲದಲ್ಲಿ ಒಂದು ಮನೆಯಲ್ಲಿ ಐದಾರು ಜನ ಇರುವುದೇ ಅಪರೂಪ. ಇದ್ದರೂ ಎಲ್ಲರೂ ಅವರವರ ಮೊಬೈಲು ಟಿವಿ ಹೀಗೆ ಅವರವರ ಪಾಡಿಗೆ ಇರುತ್ತಾರೆ . ಯಾರೊಂದಿಗೂ ಮಾತಿಲ್ಲ ಎಲ್ಲಿಯಾದರೂ ಸಮಾರಂಭಗಳಲ್ಲಿ ಸಿಕ್ಕಿದರು ಹಾಯ್ ಹೇಳಿ ಮೊಬೈಲ್ ಹಿಡಿದು ಕುಳಿತು ಬಿಡುತ್ತಾರೆ. ಹೀಗಿರುವಾಗ ಎಲ್ಲಿಯ ಕೂಗು ಕುಟುಂಬ? ಜನರೇ ಒಬ್ಬರಿಗೊಬ್ಬರು ಮಾತಿಲ್ಲ. ಮೊಬೈಲೇ ಅವರ ಬಂದು ಬಳಗ .ಇನ್ನು 15 ರಿಂದ 20 ಜನರು ಒಟ್ಟಿಗೆ ಇರುವುದು, ನಮ್ಮ ಕಾಲಕ್ಕೆ ಮಾತ್ರ ಅಷ್ಟೇ .ಈಗಿನ ಕಾಲಕಲ್ಲ ಅಂತ ನನ್ನ ಅಭಿಪ್ರಾಯ ಈಗಲೂ ಎಲ್ಲೋ ಕೆಲವು ಮನೆಗಳಲ್ಲಿ ಇರಬಹುದೊ  ಏನೋ .

ಶ್ರೀಮತಿ ಪದ್ಮ ಆರಾಧ್ಯ 

ಕೂಡು ಕುಟುಂಬ ಅಥವಾ ಅವಿಭಕ್ತ ಕುಟುಂಬ ಎಂದರೆ ಅಣ್ಣ-ತಮ್ಮಂದಿರು. ಕೆಲವೊಮ್ಮೆ ಅಕ್ಕ ತಂಗಿಯರು ಕೂಡಿ ಬಾಳುವುದು. ಸಾಮಾನ್ಯವಾಗಿ ಅಣ್ಣ ತಮ್ಮಂದಿರು ಒಂದೇ ಸೂರಿ ನಡಿಗೆ ಬಾಳುತ್ತಿರುತ್ತಾರೆ. ಈ ಬಾಳ್ವೆಯಲ್ಲಿ ಅನುಕೂಲತೆ ಅನಾನುಕೂಲತೆ ಎರಡು ಇರುತ್ತದೆ. ಆದರೆ ನನ್ನ ಅಭಿಪ್ರಾಯ ಅನಾನುಕೂಲತೆಗಳೇ ಹೆಚ್ಚು ಎಂದು

 ತಾಳ್ಮೆ, ಸಂಯಮ ,ಆವೇಶ, ಕಸಿವಿಸಿ ಎಲ್ಲವನ್ನು ಸಹಿಸಿ ನಡೆದುಕೊಳ್ಳಬೇಕು. ಒಬ್ಬರಿಗೆ ಬೇಕಾಗುವುದು ಮತ್ತೊಬ್ಬರಿಗೆ  ಬೇಡವಾಗುತ್ತೆ. ರುಚಿ, ಶುಚಿ, ಸಂಯಮ, ಸ್ವಚ್ಛತೆ ಒಬ್ಬರಿಂದ ಒಬ್ಬರಿಗೆ ವಿಧವಿಧವಾಗಿರುತ್ತದೆ. ಇದರಿಂದ ಹಿಂಸೆ ಮನಸ್ತಾಪಗಳು ಹೆಚ್ಚುತ್ತವೆ. ಆಸೆ, ಆಕಾಂಕ್ಷೆಗಳು ಮಾಯವಾಗಿ ಮನಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಒಬ್ಬರು  ನಿರಾಳವಾಗಿ ಹಣ ಖರ್ಚು ಮಾಡಿದರೆ, ಅದೇ ಕುಟುಂಬದ ಇನ್ನೊಬ್ಬ ಸದಸ್ಯರ ಸಂಪಾದನೆ ಕಡಿಮೆ ಇದ್ದು,ಹಣವನ್ನು ನಿಯಮಿತವಾಗಿ ಬಳಸುವಂತಾಗಿ, ಸಂಸಾರದಲ್ಲಿ ಹೊಟ್ಟೆಕಿಚ್ಚು ಹುಟ್ಟಿ, ಕುಟುಂಬದಲ್ಲಿ ಬಿರುಕು ಉಂಟಾಗುತ್ತದೆ. ಸಂಪ್ರದಾಯ, ವೈಯುಕ್ತಿಕ ಶಿಸ್ತಿಗೆ ಕಡಿವಾಣ, ಗೌಪ್ಯತೆಗೆ ಧಕ್ಕೆ ಇವು ಇರುತ್ತವೆ . 

 ಈಗಿನ ಸಮಾಜದಲ್ಲಿ ಅವಿಭಕ್ತ ಕುಟುಂಬ ಬಹಳ ವಿರಳ.ಈಗಿನ ಸಾಮಾನ್ಯ ಬೆಲೆ ಗಗನಕ್ಕೇರಿದೆ. ಅಂದರೆ ಒಬ್ಬರ ದುಡಿಮೆ ಸಂಸಾರಕ್ಕೆ ಸಾಕಾಗುವುದು ಕಷ್ಟಕರ. ಪತಿ, ಪತ್ನಿಯರಿಬ್ಬರೂ ದುಡಿದು ಸಂಸಾರ ನೌಕೆಯಲ್ಲಿ ಇರುವುದರಿಂದ .ಇಬ್ಬರೂ ಹೊರಗೆ ದುಡಿಯಲು ಹೋದರೆ ಅದು ಅವಿಭಕ್ತ ಆಗುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಕಾಲೇಜು ಪದವಿ, ಹೊರದೇಶಗಳಲ್ಲಿ ಉದ್ಯೋಗಕ್ಕೆ ಹೋಗುವುದು, ಯಾವುದಕ್ಕೂ ಹೆಚ್ಚು ಅವಕಾಶವಿಲ್ಲದೆ ಬರೀ ಅಡುಗೆ ಮನೆಯಲ್ಲಿಯೇ ಒಂದು ಯಂತ್ರದಂತೆ ಕೆಲಸ ಮಾಡಬೇಕಾಗುತ್ತದೆ.

 ಮಕ್ಕಳ ಭವಿಷ್ಯ, ವೈದ್ಯಕೀಯ, ಎಂಜಿನಿಯರಿಂಗ್ -ಆ ಕನಸು ಕನಸಾಗೇ ಉಳಿಯಬಹುದು. ಏಕೆಂದರೆ ಅವಿಭಕ್ತ ಕುಟುಂಬದ ಅಡುಗೆ ಮನೆಯಲ್ಲಿ ದುಡಿಯುವ  ಹೆಂಗಸರು ಈಗ ಸಿಗುವುದು ಬಹಳ ವಿರಳ. ಒಬ್ಬರು ಮತ್ತೊಬ್ಬರಿಗೆ ಆಗುವುದಿಲ್ಲ. ಬೇಸಿಗೆ ಕಾಲದಲ್ಲಿ ಯಾರು ಯಾರನ್ನು ನಿರೀಕ್ಷಿಸುವುದು ಬಹಳ ವಿರಳ. ಈಗ ಹಬ್ಬ ಹರಿದಿನಗಳು ಸೀಮಿತವಾಗಿಯೇ ನಡೆಯುತ್ತವೆ. ಅವಿಭಕ್ತ ಕುಟುಂಬ, ಕ್ರಿಕೆಟ್ ಆಟ, ಸಿನಿಮಾ ಎಲ್ಲಾ ಸೀಮಿತವಾಗಿವೆ. ಇದರಲ್ಲಿ ವೈಯುಕ್ತಿಕ ಆಸೆ ಆಕಾಂಕ್ಷೆಗಳಿಗೆ ಅವಕಾಶವಿರುವುದಿಲ್ಲ. ಸ್ವತಂತ್ರ್ಯಕ್ಕೆ ಬರುತ್ತದೆ. ನನ್ನ ಅಭಿಪ್ರಾಯ, ಅವಿಭಕ್ತ ಕುಟುಂಬದಿಂದ ಸ್ವಾತಂತ್ರ್ಯ, ಸಂತೋಷ ಎಲ್ಲವನ್ನು ತ್ಯಾಗ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಅವಿಭಕ್ತ ಕುಟುಂಬ ಈಗಿನ ಜನಜೀವನದ  ವಾತಾವರಣ, ಸಾಮಾಜಿಕ ಹೊಣೆ, ಸ್ಪರ್ಧಾತ್ಮಕ ಜೀವನ, ವೈಜ್ಞಾನಿಕ ಬೆಳವಣಿಗೆಗೆ ಎಲ್ಲದಕ್ಕೂ ಧಕ್ಕೆಯಾಗಿದೆ. ಈಗಿನ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹ ಹುರಿದುಂಬಿಸುವುದು, ಮುಖ್ಯವಾಗಿ ಹೆಣ್ಣು ಮಕ್ಕಳಿಗಂತೂ ಅವಿಭಕ್ತ ಕುಟುಂಬದಲ್ಲಿ ಇರುವುದಿಲ್ಲ.

ಆದ್ದರಿಂದ ಅವಿಭಕ್ತ ಕುಟುಂಬದಲ್ಲಿ ಅನಾನುಕೂಲಗಳೇ ಹೆಚ್ಚು ಎಂಬುದು ನನ್ನ ಅಭಿಪ್ರಾಯ.

ಶ್ರೀ ಆನಂದ್ ಎಸ್ ಬಿ 

"ಕೂಡು ಕುಟುಂಬವೆಂಬ ಕಜ್ಜಾಯ"

ಐದು ದಶಕಗಳ ಹಿಂದೆ, ಹನುಮಂತನಗರದ ಹೃದಯಭಾಗದಲ್ಲಿ ಉದಯಿಸಿದವರು ನಾವು:

558,ಮೊದಲನೆ ಅಡ್ಡ ರಸ್ತೆ, ಮೊದಲನೆ ಮುಖ್ಯ ರಸ್ತೆಯಲ್ಲಿತ್ತು

ಹನುಮಂತನಗರ ಬೆಂಗಳೂರು ಹತ್ತೊಂಬತ್ತು

ಆಗಿನಕಾಲಕ್ಕೆ  ದೇವಮೂಲೆಯಲ್ಲಿತ್ತು 

ನಮ್ಮ ಮನೆ. "ಚೈತನ್ಯ ನಿಲಯ"

ಚೈತನ್ಯದ ಚಿಲುಮೆಯಾಗಿದ್ದರು ಒಲುಮೆಯ ಅಣ್ಣಯ್ಯ

ಎರಡು ಕೋಣೆಯ ಪುಟ್ಟ ಮನೆ, ಒಂದೆ ಬಚ್ಚಲುಮನೆ,

ಒಂದೇ ಪಾಯಿಖಾನೆ, ವಾಸಿಸುತ್ತಿದ್ದದ್ದು15 ರಿಂದ 18 ಜನ!

ಎಂದಿಗೂ ಇರುತ್ತಿರಲಿಲ್ಲ ಕೋಪ ಕದನ.

ಚೈತನ್ಯ ನಿಲಯ,ಸೌರಮಂಡಲ,ಅಣ್ಣಯ್ಯ ಸೂರ್ಯ

ಮಕ್ಕಳು ನವಗ್ರಹ ,ಮೊಮ್ಮಕ್ಕಳು ಉಪಗ್ರಹ

ಮೀನಾಅಜ್ಜಿ ಮಿನುಗುವ ದೃವತಾರೆ

ನಮ್ಮ ಕೂಡು ಕುಟುಂಬದ ಕಣ್ಮಣಿ ಅಣ್ಣಯ್ಯರಾಗಿದ್ದರು

ಕೂಡು ಕುಟುಂಬದಲ್ಲಿ ಆರೈಕೆ ಹಾರೈಕೆ ಪೂರೈಕೆಗೆ ಆದ್ಯತೆಯಿರುತ್ತಿತ್ತು

ಮೂರು ಚೊಂಬಲಿ ಸ್ನಾನ ಮುಗಿಸಬೇಕಿತ್ತು

ಮೂರು ಬಟ್ಟೆಲಿ ದಿನ ಕಳೆಯಬೇಕಿತ್ತು

ಕೂಡು ಕುಟುಂಬದಲ್ಲಿತ್ತು ಮಮತೆಯ ಕೈತುತ್ತು

ನಮಗೆ ಓದು,ಆಟ ಮನೆಗೆಲಸಕ್ಕೆ ಒತ್ತಿತ್ತು

ನಿತ್ಯೋಪಹಾರಕ್ಕಿರುತ್ತಿತ್ತು ಅವಲಕ್ಕಿ-ಉಪ್ಪಿಟ್ಟು 

ಹಬ್ಬಗಳಿಗಿರುತ್ತಿತ್ತು ಬೇಳೆಬಾತ್-ಒಬ್ಬಟ್ಟು 

ನಿತ್ಯ ಅತಿಥಿಗಿರುತ್ತಿತ್ತು ಕಾಫಿ-ಬಿಸ್ಕತ್ತು

ಮಕ್ಕಳಿಗೆ ಸವಿಯುವುದಕ್ಕೆ ಬ್ರೆಡ್ಡು-ರಸ್ಕಿತ್ತು

ಕೂಡು ಕುಟುಂಬದಲ್ಲಿ ಹಿರಿಯರು ದಂಡಿಸುತ್ತಿದ್ದರೂ, 

ಕಿರಿಯರು ವಂದಿಸುತ್ತಿದ್ದರು.

ಹಿರಿಯರಲ್ಲಿರುತ್ತಿತ್ತು ಭಯ ಭಕ್ತಿ 

ಕಿರಿಯರಿಗೆ ಸಿಗುತ್ತಿತ್ತು ಅಭಯ ಶಕ್ತಿ.

ಇದ್ದೇವು ಹತ್ತಾರು,ಬಂದರು ಮತ್ತಾರು, 

ಹೆತ್ತವರ ಜೊತೆ ಇದ್ದರು ಹೊತ್ತವರು. 

ಇತ್ತಿವರು ಅತ್ತವರು

ಭಗವಂತನಿಗೇ ಬಿಡುವು ಕೊಟ್ಟವರು.

ಸುಪ್ರಭಾತದಿಂದ ಶುಭರಾತ್ರಿಯವರೆಗೂ ಇರುತ್ತಿತ್ತು

ಸುಖ,ಸಂತೋಷ,ಸಮಾಧಾನ ಸಂತೃಪ್ತಿ

ಇಲ್ಲಿಗೆ ಕೂಡು ಕುಟುಂಬದ ನೆನಪು ಸಮಾಪ್ತಿ

"ಕೂಡಿಬಾಳಿದರೆ ಸ್ವರ್ಗ ಸುಖ ,ಓಡಿಹೋದರೆ ನರಕ ದುಃಖ"

ತರಂಗಾಂತರಂಗ 

ಲೇಖಕರು : ಶ್ರೀಮತಿ ಸೌಮ್ಯ ನಾಗರಾಜ್ 

ಅವಿಭಕ್ತ ಕುಟುಂಬದ ಬಗ್ಗೆ ನನ್ನ ಅಣ್ಣ ಏ. ಎಸ್. ಜಯರಾಮ್ ಬರೆದ ಲೇಖನ ತುಂಬಾ ಚೆನ್ನಾಗಿ ಬಂದಿದೆ. ಅದನ್ನು ಓದಿದಾಗ ನನ್ನ ಮನಸ್ಸಿನಲ್ಲಿ ಬಾಲ್ಯದ ಅನೇಕ ನೆನಪುಗಳು ಹಾದುಹೋದವು. ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳುತ್ತಿದ್ದೇನೆ. 

    ನಮ್ಮ ತಾತನವರ ಮನೆಯಲ್ಲಿ ನಾವೆಲ್ಲ ಒಟ್ಟಿಗೆ ನಮ್ಮ ತಂದೆಯವರ ಸಂಸಾರದ ಜೊತೆ ನಮ್ಮ ಚಿಕ್ಕಪ್ಪಂದಿರ ಕುಟುಂಬಗಳು ನಮ್ಮ ಅಜ್ಜಿ ತಾತ ಮತ್ತು ಸೋದರತ್ತೆಯರು (ಅವರುಗಳ ಮದುವೆಗೆ ಮುಂಚೆ) ಹೀಗೆ ಸುಮಾರು 14-15 ಜನ ಇದ್ದೆವು. 

 ಆ ಮನೆಗೆ ನಮ್ಮ ತಾತನವರೇ ಯಜಮಾನ ಹಾಗೂ ವಿತ್ತ ಮಂತ್ರಿ. ಎಲ್ಲ ಮಕ್ಕಳ ಸಂಪಾದನೆಯೂ ತಾತನ ಖಜಾನೆಯಲ್ಲಿ ಒಟ್ಟಾಗಿ ಅಲ್ಲಿಂದ ನಮ್ಮ ಗೃಹಮಂತ್ರಿಯಾದ ಅಜ್ಜಿಯವರೊಂದಿಗೆ ಸಮಾಲೋಚನೆಯ ನಂತರ ಉತ್ತಮ ರೀತಿಯಲ್ಲಿ ವಿತರಣೆಯಾಗುತ್ತಿತ್ತು. ಮನೆಯ ಎಲ್ಲರೂ(ನಮ್ಮತಾತನೂ ಸೇರಿ) ನಮ್ಮ ಅಜ್ಜಿ ಹೇಳಿದಂತೆ ಕೇಳುತ್ತಿದ್ದೆವು. ಕಾರಣ ಅವರು ಮಹಾ ಬುದ್ಧಿವಂತೆ! ಬಹಳ ಚಾಣಾಕ್ಷತೆಯಿಂದ ಸಂಸಾರವನ್ನು ತೂಗಿಸುತ್ತಿದ್ದರು. 

   ಮನೆಯಲ್ಲಿ ಸಾಮಾನ್ಯವಾಗಿ ಶಾಂತ ವಾತಾವರಣವಿರುತ್ತಿತ್ತು. ಅಪರೂಪಕ್ಕೆ ನಮ್ಮ ಅಜ್ಜಿ, ತಾತನ ನಡುವೆ ಮಾತಿನ ಚಕಮಕಿ ನಡೆದು ತಾರಕಕ್ಕೆ ಏರಿದರೆ ನಮ್ಮ ಚಿಕ್ಕಪ್ಪ ಬಂದು ರೇಡಿಯೋದ ಸ್ವರವನ್ನು ಏರಿಸಿ ಹೋಗುತ್ತಿದ್ದರು. (ಅಕ್ಕಪಕ್ಕದವರಿಗೆ ತೊಂದರೆ ಆಗಬಾರದೆಂದಲ್ಲ. ಅವರಿಗೆ ಜಗಳದ ಬಗ್ಗೆ ಸ್ಪಷ್ಟತೆ ಸಿಗದಿರಲೆಂದು!😀) ಈಗ ನೆನೆಸಿಕೊಂಡರೆ ನಗು ಬರುತ್ತದೆ. ಇದು ಬಹಳ ತಾತ್ಕಾಲಿಕ. ಆಮೇಲೆ ಏನೂ ಆಗಿಲ್ಲವೆಂಬಂತೆ ಇಲ್ಲ ಸಾಮಾನ್ಯವಾಗುತ್ತಿತ್ತು. 

  ವರ್ಷಗಳು ಕಳೆದಂತೆ ನಮ್ಮ ಚಿಕ್ಕಪ್ಪನ, ಸೋದರತ್ತೆಯರ ಮದುವೆಗಳಾದವು. ಆಗೆಲ್ಲ ಹುಡುಗಿ ನೋಡಲು ಗಂಡಿನ ಕಡೆಯವರು ಬಂದರೆ ಏನೋ ಸಡಗರ. ಅಲ್ಲಿ ಇಲ್ಲಿ ಎಳೆದಾಡಿಸಿಕೊಳ್ಳುತ್ತಿದ್ದ ಕಬ್ಬಿಣದ ಕುರ್ಚಿಗಳಿಗೆ ಎಲ್ಲಿಲ್ಲದ ಆದರ. ಅವುಗಳ ಮೇಲೆ ಮೆತ್ತನೆಯ ದಿಂಬು ಹಾಗೂ ಹೆಂಗಸರು ಚಿತ್ತಾರವಾಗಿ ಕಸೂತಿ ಹಾಕಿದ ಕವರ್ಗಳಿಂದ ಅಲಂಕಾರಗೊಳ್ಳುತ್ತಿದ್ದವು. ದೊಡ್ಡ ಪಾತ್ರೆಯಲ್ಲಿ ಸ್ಪೆಶಲ್ ಉಪ್ಪಿಟ್ಟು ತಯಾರಾಗುತ್ತಿತ್ತು. ಹಾಗೆಯೇ ಫಿಲ್ಟರ್ ಕಾಫಿ ಕೂಡ. ಬಂದವರು ನಾಲ್ಕೆ ಜನ ಆದರೂ ಮನೆಯವರಿಗೆಲ್ಲ ಆಗಬೇಕಲ್ಲ!

ಅವರೆಲ್ಲ ಬಂದು ಹೋಗುವವರೆಗೂ ಗಲಾಟೆ ಮಾಡದೇ ಸುಮ್ಮನೆ ಕೋಣೆಯಲ್ಲಿ ಕೂತಿರಬೆಂದು ನಮಗೆ ಮೊದಲೇ ತಾಕೀತಾಗಿರುತ್ತಿತ್ತು. ಕೋಣೆಯ ಬಾಗಿಲ ಸಂದಿನಿಂದ ಎಷ್ಟು ಜನ ಬಂದಿದ್ದಾರೆ ಅವರಲ್ಲಿ ಮದುವೆ ಗಂಡು ಯಾರು? ಹೇಗಿದ್ದಾರೆ ಎಂದೆಲ್ಲ ವಿಷಯ ಚರ್ಚಿಸುವುದರಲ್ಲಿ ನಮಗೆ ಮಜಾ ಸಿಗುತ್ತಿತ್ತು. ಆಮೇಲೆ ಘಮಘಮಿಸುವ ಸ್ಪೆಷಲ್ ಉಪ್ಪಿಟ್ಟು ತಿನ್ನುವುದು!(ಇವಾಗ ಮಕ್ಕಳು ಉಪ್ಪಿಟ್ಟೆಂದರೆ ಮೂಗೆಳೆಯುತ್ತಾರೆ. ಆಗ ಅದೇ ನಮಗೆ ಸ್ಪೆಷಲ್ ತಿಂಡಿ! )

  ನಮ್ಮ ಸೋದರತ್ತೆಯರು ಬಾಣಂತನಕ್ಕೆ ಬರುವುದು, ಬಂಧು ಬಂದವರು ಬಂದು ದಿನಗಟ್ಟಲೆ ಇದ್ದು ಹೋಗುವುದು ಎಲ್ಲ ಸರ್ವೇಸಾಮಾನ್ಯ. 

 ಮೈಸೂರಿನಲ್ಲಿದ್ದ ನಮ್ಮ ಸೋದರತ್ತೆಯ ಸಂಸಾರ (6 ಜನ) ಬಂದರೆ ನಮಗೆಲ್ಲ ಬೇಸಿಗೆ ರಜೆ 2 ತಿಂಗಳು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅವರು ಎಲ್ಲರಿಗೂ ನೀಟಾಗಿ ಜಡೆ ಹೆಣೆಯುತ್ತಿದ್ದರು. ಒಟ್ಟಿಗೆ ಕೂತು ಕೈತುತ್ತು ತಿನ್ನುವ ಮಜವೇ ಬೇರೆ!

  ಅವಿಭಕ್ತ ಕುಟುಂಬದಲ್ಲಿ ತೊಂದರೆ ಇಲ್ಲವೆಂದಲ್ಲ. ಹಿರಿಯರೂ ಕಿರಿಯರೂ ಬಹಳಷ್ಟು ಕಷ್ಟಗಳನ್ನು ಅನುಭವಿಸಿರುತ್ತಾರೆ. ತ್ಯಾಗಗಳನ್ನು ಮಾಡಿರುತ್ತಾರೆ. ಆ ರೀತಿಯ ಬದುಕಿನಲ್ಲಿ ಬೇಕಾದಷ್ಟು ನ್ಯೂನತೆಗಳಿರುತ್ತವೆ. ವೈಯಕ್ತಿಕ ಗೌಪ್ಯತೆ (privacy), ನಮ್ಮದೇ ಆದ ಬಿಡುವಿನ ಸಮಯ(personal space) ಎಂದೆಲ್ಲ ಈಗಿನ ಕಾಲದ ಪದಗಳಿಗೆ ಆಗ ಆಸ್ಪದವೇ ಇರುತ್ತಿರಲಿಲ್ಲ. ಎಲ್ಲ ಖುಲ್ಲಂ ಖುಲ್ಲಾ. ಏನನ್ನೂ ಮುಚ್ಚಿಟ್ಟುಕೊಳ್ಳಲು ಆಗುತ್ತಿರಲಿಲ್ಲ. ಸಣ್ಣ ಪುಟ್ಟ ಮನಸ್ತಾಪಗಳು, ಹಣಕಾಸಿನ ಮುಗ್ಗಟ್ಟು, ಪರೀಕ್ಷೆ ಸಮಯದಲ್ಲೂ ಮನೆ ತುಂಬಾ ಜನ ಗಲಾಟೆ, ಎಲ್ಲ ಬಂದಾಗ ಬೇಸರವಾಗುತ್ತಿತ್ತು. ಆದರೆ ಪರಸ್ಪರರ ಗಟ್ಟಿ ಬಾಂಧವ್ಯ ಇದನ್ನೆಲ್ಲ ಮೀರಿಸುತ್ತಿತ್ತು. ಇದಕ್ಕೆಲ್ಲ ಕಾರಣ ಮನೆಯ ಹೆಂಗಸರ ಅಪಾರ ಸಹನೆ, ತಾಳ್ಮೆ, ಹಾಗೂ ಗಂಡಸರ (ಅಣ್ಣತಮ್ಮಂದಿರ) ನಡುವಿನ ಪರಸ್ಪರ ಪ್ರೀತಿ ಗೌರವ. 

 ಯಾರು ಯಾರ ಮಕ್ಕಳಿಗೆ ಬೇಕಾದರೂ ಊಟ ಮಾಡಿಸಬಹುದು, ಅಂಗಿ ತೊಡಿಸಬಹುದು, ಪಾಠ ಹೇಳಿಕೊಡಬಹುದು, ಬೈದು ಬುದ್ಧಿ ಹೇಳಬಹುದು. ಯಾರೂ ತಪ್ಪಾಗಿ ತಿಳಿಯುತ್ತಿರಲಿಲ್ಲ!

ಅವಿಭಕ್ತ ಕುಟುಂಬ ಮಕ್ಕಳಿಗೆ ಒಂದು ದೊಡ್ಡ ಗುರುಕುಲದಂತೆ!

  ಈಗಿನ ಕಾರ್ಪೊರೇಟ್ ಯುಗದಲ್ಲಿ ಕಂಪೆನಿ ಗಳಲ್ಲಿ ಟೈಮ್ ಮ್ಯಾನೇಜ್ಮೆಂಟ್, ಸ್ಕಿಲ್ ಡೆವಲಪ್ಮೆಂಟ್ ಅಂತ ಏನೆಲ್ಲ ತರಬೇತಿ ಕೊಡುತ್ತಾರೋ ಅದಷ್ಟೇ ಅಲ್ಲದೆ - ಸಹನೆ, ತ್ಯಾಗ, ತಪ್ಪುಗಳನ್ನು ಕ್ಷಮಿಸಿ ಮರೆತು ಮುಂದೆ ಹೋಗುವುದು, ಧನಾತ್ಮಕ ಚಿಂತನೆ,(ಋಣಾತ್ಮಕ ಚಿಂತನೆಗೆ ಮುಖ್ಯ ಕಾರಣವಾದ ಏಕಾಂಗಿತನಕ್ಕೆ ಜಾಗ ಸಮಯ ಎರಡೂ ಇರುತ್ತಿರಲಿಲ್ಲ!) ಎಲ್ಲ ಪಾಠ ಪ್ರಾಯೋಗಿಕವಾಗಿ ಮನೆಯಲ್ಲೇ ಸಿಗುತ್ತಿತ್ತು. 

   ಇಂದಿನ ಕಾಲದಲ್ಲಿ ಅದು ಸರಿ ಹೋಗುವುದಿಲ್ಲವೆಂದಲ್ಲ. ಇವತ್ತಿನ ವೇಗದ ಜೀವನಕ್ಕೆ ಆಗಿನ ಕಾಲದ ಹಾಗೆ ಒಟ್ಟಾಗಿ ಕುಳಿತು ಮಾತಾಡುವ ಸಮಸ್ಯೆ ಬಗೆಹರಿಸುವ, ಹೊಂದಾಣಿಕೆ ಮಾಡಿಕೊಂಡು ಹೋಗುವ ಸಮಯವಿಲ್ಲ. ಈಗಿನ ಮಕ್ಕಳಿಗೆ ಹೊರ ಜಗತ್ತಿನ ಸವಾಲುಗಳು ಸುಲಭವಾಗಿಲ್ಲ. ನಮ್ಮ ಹಾಗೆ ಸಣ್ಣ ಜಾಗದಲ್ಲಿ ಕೆಲವೇ ಪುಸ್ತಕಗಳಿಟ್ಟುಕೊಂಡು ಓದಲು ಆಗುವುದಿಲ್ಲ. ಎಲ್ಲದಕ್ಕೂ ಕಂಪ್ಯೂಟರ್ ಬೇಕು. ಹಾಗೇ ದೊಡ್ಡವರಿಗೂ ಕೆಲಸದ ಒತ್ತಡ ಅಪಾರ. ಮನೆಯ ವಾತಾವರಣ ಶಾಂತವಾಗಿದ್ದರೆ ಅವರ ಓದಿನ ಅಥವಾ ಕೆಲಸದ ಒತ್ತಡಗಳನ್ನು ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗೇ ಇನ್ನೂ ಅನೇಕ ಅನಿವಾರ್ಯ ಕಾರಣಗಳಿಂದ ಅವಿಭಕ್ತ ಕುಟುಂಬದ ಬದಲಾಗಿ ವಿಭಕ್ತ ಕುಟುಂಬದಲ್ಲೇ ಇದ್ದುಕೊಂಡು ಹಬ್ಬ ಮುಂತಾದ ವಿಶೇಷ ದಿನಗಳಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಾ ಒಬ್ಬರಿಗೊಬ್ಬರು ಪ್ರೀತಿ, ಗೌರವ ತೋರಿಸುತ್ತಾ ಬೇಕೆಂದಾಗ ಎಲ್ಲ ರೀತಿಯ ಸಹಾಯಕ್ಕೂ ಒಟ್ಟಾಗುವ ಇಂದಿನ ಪೀಳಿಗೆಯ ಜೀವನ ಶೈಲಿಯನ್ನು ಒಪ್ಪಿಕೊಳ್ಳುವ ಮನಸ್ಸು ನಮ್ಮ ಪೀಳಿಗೆಗೆ ಇದೆಯೆಂದು ನಂಬುತ್ತೇನೆ. 

   ಈ ವಿಷಯದ ಬಗ್ಗೆ ಬರೆದಷ್ಟೂ ಬರೆಯಬೇಕೆನಿಸುತ್ತೆ. ನಮ್ಮ ಕಾಲದಲ್ಲಿದ್ದ ಕುಟುಂಬ, ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲುತ್ತಿದ್ದ ರೀತಿ, ನಮ್ಮ ಅಜ್ಜಿಯವರು ನಿತ್ಯ ತರಕಾರಿ ಹೆಚ್ಚುತ್ತಾ ದಿನಕ್ಕೊಂದರಂತೆ-ಸೋಮವಾರ ಶಿವಾಪರಾಧ ಸ್ತುತಿ ಯಿಂದ ಶುರುವಾಗಿ ಶನಿವಾರ ವೆಂಕಟೇಶ ಸುಪ್ರಭಾತದವರೆಗೆ ಹೇಳುತ್ತಿದ್ದುದು (ಇವೆಲ್ಲ ಅವರಿಗೆ ಕಂಠಪಾಠವಾಗಿತ್ತು!), ನಮ್ಮ ತಾತ ರಸವತ್ತಾಗಿ ರಾಮಾಯಣ ಮಹಾಭಾರತ ಮುಂತಾದ ಕಥೆಗಳನ್ನು ಹೇಳುತ್ತಿದ್ದುದು, ನಮ್ಮ ಅಮ್ಮ ಚಿಕ್ಕಮ್ಮಂದಿರ ಅಡುಗೆಗಳ ರುಚಿ, ಶುಕ್ರವಾರದ ಲಕ್ಷ್ಮಿ ಪೂಜೆ, ಏನೇ ಮಾತಾಗಲಿ ಹಿರಿಯಣ್ಣನಾದ ನಮ್ಮ ತಂದೆ ಹಾಗೂ ನಮ್ಮ ತಾಯಿಗೆ ಎಲ್ಲರೂ ಗೌರವ ಕೊಡುತ್ತಿದ್ದ ರೀತಿ, ನಮ್ಮ ಚಿಕ್ಕಪ್ಪನವರ ನಿತ್ಯದ ಪೂಜೆಯನ್ನು ನೋಡಿ ಕೇಳಿ ಎಲ್ಲ ಮಂತ್ರಗಳು ನಮಗೆ ಬಾಯಿಪಾಠವಾಗುತ್ತಿದ್ದುದು, ನಮ್ಮ ಚಿಕ್ಕಪ್ಪ ಚಿಕ್ಕಮ್ಮ ಫಸ್ಟ್ ಟೈಮ್ ಕ್ಲಿನಿಕ್ ಆರಂಭಿಸಿದ್ದು, ಗೌರಿ ಗಣೇಶನ ಹಬ್ಬಕ್ಕೆ ನಮ್ಮ ಇನ್ನೊಬ್ಬರು ಚಿಕ್ಕಪ್ಪನ ಸಂಸಾರವೂ ಬಂದು ಎಲ್ಲರೂ ಒಟ್ಟಾಗಿ ಸಡಗರದಿಂದ ಹಬ್ಬ ಆಚರಿಸುತ್ತಿದ್ದುದು, ಮನೆಯವರೆಲ್ಲ  ಒಟ್ಟಾಗಿ ರಾತ್ರಿ ಊಟವಾದ ಮೇಲೆ ಯಾವುದಾದರೂ ವಿಷಯ ಚರ್ಚಿಸುತ್ತಿದ್ದುದು (ಹೆಚ್ಚು ಕಡಿಮೆ 15-20 ಸಲ ಕಾಶಿಗೆ ಮುಂದಿನ ವಾರವೇ ಹೋಗುತ್ತೇವೇನೋ ಎನ್ನುವಷ್ಟು ಪ್ಲಾನಿಂಗ್ ಆಗಿದೆ!), ಹೀಗೆ ನೆನಪುಗಳು ಅಲೆಗಳಂತೆ ಬರುತ್ತಲೇ ಇರುತ್ತವೆ. 

    ನನ್ನ ಅಂತರಂಗದ ನೆನಪಿನ ತರಂಗಗಳಲ್ಲಿ ಕೆಲವನ್ನು ಹೇಗೆ ಬಂತೋ ಹಾಗೆಯೇ ನಿಮ್ಮೆಲರೊಂದಿಗೆ ಹಂಚಿಕೊಂಡಿದ್ದೇನೆ. 

 ಧನ್ಯವಾದಗಳು 🙏

ಸೂಚನೆ : ಬರೆಯಬೇಕಾಗಿದ್ದುದು ಅಭಿಪ್ರಾಯ . ಅನೇಕರು ಅನುಭವಗಳನ್ನು ಬರೆದಿದ್ದೀರಿ. ಅನುಭವದ ಜೊತೆಗೆ , ಜಾಸ್ತಿ ಅಭಿಪ್ರಾಯ ಬರೆದು, ಬಹುಮಾನಗಳಿಸಿದವರು; 

ಶ್ರೀಮತಿ ಪದ್ಮ ಆರಾಧ್ಯ 

ಆವರಿಗೆ  ಅಭಿನಂದನೆಗಳು.

ತಾತಪ್ಪನ ತಲೆದಿಂಬು ಕಥೆಯ ಉತ್ತರಗಳು 

ಲೇಖಕರು : ಶ್ರೀಮತಿ ರಾಜೇಶ್ವರಿ  ನಾಗರಾಜ್ 

ತಾತನ ಕಾಲದಲ್ಲಿ ಹಣವನ್ನು ಬ್ಯಾಂಕಿನಲ್ಲಿ ಇಡುವುದು ತಿಳಿದಿರಲಿಲ್ಲ ಅಜ್ಜಿ ಸಾಸಿವೆ ಡಬ್ಬದಲ್ಲಿ ಇಟ್ಟರೆ ತಾತ ತಲೆದಿಂಬಿನ ಅಡಿಯಲ್ಲಿ ಸೇರಿಸುತ್ತಿದ್ದರು ಅವರ ಆದಿಂಬನ್ನು ಎಲ್ಲಿ ಹೋದರು ತಮ್ಮೊಡನೆ ಒಯ್ಯುತ್ತಿದ್ದರು ಎಲ್ಲರಿಗೂ ದಿಂಬಿನ ರಹಸ್ಯ ತಿಳಿದಿರಲಿಲ್ಲ ಸೇರಿಸಿ ಬಿಟ್ಟಿದ್ದರು ನಮ್ಮ ತಂದೆಯವರು ನಮ್ಮ ದೊಡ್ಡಪ್ಪನವರು ಸಹ ಇದೇ ರೀತಿ ಹಣವನ್ನು ಸೇರಿಸಿ ಇಡುತ್ತಿದ್ದರು ಒಮ್ಮೆ ನಾನು ನಮ್ಮ ಅಕ್ಕನನ್ನು ಕೇಳಿದ್ದಕ್ಕೆ ಅದು ನಿನಗೆ ಬೇಡ ನೀನು ಸಂಪಾದಿಸಿ ಎಂದು ಬಿಟ್ಟರು.

 ನಮ್ಮಪ್ಪನನ್ನು ಪಶುಲಾಯಿಸಿದಾಗ ಅವರು ತಮ್ಮ ಅಂತ್ಯಕಾಲದಲ್ಲಿ ಹಣವನ್ನು ಉಪಯೋಗಿಸಲು ಇಚ್ಛಿಸುತ್ತಿದ್ದರು. ಪರರ ಹಣದಿಂದ ಕರ್ಮಂತರ ಮಾಡಿದರೆ ಮತ್ತೆ ಅವರ ಋಣ ತೀರಿಸಲು ಮರಜನ್ಮವೆತ್ತಬೇಕು ನಮಗೆ ಮೋಕ್ಷ ಸಿಗಬೇಕಾದರೆ ನಮ್ಮ ಹಣವನ್ನೇ ಬೇಯಿಸಬೇಕೆಂದು ಅವರ ನಂಬಿಕೆ ಆದುದರಿಂದ ತಾತ ಎಲ್ಲಿ ಹೋದರು ತಮ್ಮ ದಿಂಬನ್ನು ಒಯ್ಯುತ್ತಿದ್ದರು ಇದೇ ದಿಂಬಿನ ರಹಸ್ಯ.

ಉತ್ತಮ ಬರಹಕ್ಕಾಗಿ ಶ್ರೀಮತಿ ರಾಜೇಶ್ವರಿ  ನಾಗರಾಜ್  ಅವರಿಗೆ ಅಭಿನದನೆಗಳು  

  ನಾನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ  ಉತ್ತರ ಹೀಗಿತ್ತು- ಜಯರಾಂ ಎ ಎಸ್ 

ಅಜ್ಜಿ- ತಾತ ಅವರು  ವಿಮಾನವನ್ನು ಹತ್ತಿದಾಗ  ಅಲ್ಲಿ ಸೆಕ್ಯೂರಿಟಿಯವರು,  ಇವರನ್ನು ನಿಲ್ಲಿಸಿದರು. 

"ಆ ದಿಂಬಿನಲ್ಲಿ ಏನೋ ಇದೆ, ನಮ್ಮ ಉಪಕರಣ ಸಾದು ಮಾಡಿ ತಿಳಿಸುತ್ತಿದೆ. ಅದನ್ನು ತೆಗೆದು ತೋರಿಸಿ"  ಎಂದು ಹೇಳಿದರು, ಆಗ ತಾತನ ಮುಖದಲ್ಲಿ ಗೊಂದಲ ಉಂಟಾಯಿತು . ಅಜ್ಜಿಗೆ ಕುತೂಹಲ, ಅದೇನಿರಬಹುದೆಂದು ಈಗಲಾದರೂ ಗೊತ್ತಾಗುತ್ತದೆ ಎಂದು ಕೊಂಡರು. ಕೊನೆಗೆ ಅದನ್ನು ತೆಗೆದು ತೋರಿಸಿದಾಗ ಅದರಲ್ಲಿ ಒಂದು ತೇಜೋರಿಯ ಕೀಲಿ ಕೈ ಇರುವುದು ತಿಳಿಯಿತು. ಆಗ ಸೆಕ್ಯೂರಿಟಿಯವರು ಅದನ್ನು ತಾತನ  ಜೋಬಿನಲ್ಲಿಟ್ಟು, ಡಿಂಬನ್ನೂ ಕೊಟ್ಟು  ಮುಂದಕ್ಕೆ ಕಳಿಸಿದರು.

 ವಿಮಾನದಲ್ಲಿ ಕುಳಿತ ತಕ್ಷಣ, ಅಜ್ಜಿಯವರು ಪ್ರಶ್ನೆಗಳ ಸುರಿ  ಮಳೆ ಹರಿಸಿದರು.

ಅದು ಯಾವ ಕಿಲಿಕೈ ?

ಅದನ್ನ ಯಾಕೆ ದಿಂಬಿನಲ್ಲಿ ಇಟ್ಟಿರುತ್ತೀರಿ ?

 ತಾತ ಹೇಳಿದರು:

"ನಾವು   ಬ್ಯಾಂಕಿನಲ್ಲಿ ನಮ್ಮ ಚಿನ್ನಾಭರಣಗಳನ್ನು ಇಡುವುದು ಬೇಡವೆಂದು ಹೇಳಿ ತಿಜೋರಿ ಕೊಂಡೆವಲ್ಲ ,ಅದರ ಕೀಲಿ ಕೈ. ಅದನ್ನು ಒಮ್ಮೆ ನನ್ನ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗಿದ್ದೆ. ಆ ಪಾಕೆಟ್ ಅನ್ನು ಮರೆತು ಸ್ವಲ್ಪ ದೂರ ಬಂದುಬಿಟ್ಟಿದ್ದೆ .  ನಂತರ ಮತ್ತೆ ಹೋಗಿ ಪಾಕೆಟ್ ಅನ್ನು ನೋಡಿದಾಗ, ಅದೃಷ್ಟವಶಾತ್, ಈ ಕೀಲಿ ಕೈ   ಅದರಲ್ಲೇ  ಇತ್ತು, ಅಂದಿನಿಂದ, ಈ ದಿಂಬಿನಲ್ಲಿ ಒಂದು ಸಣ್ಣ ಚೀಲ ಹೊಲಿಸಿ ಅದರಲ್ಲೇ ಇಡುತ್ತಿದ್ದೇನೆ.ನಾವು ಎಲ್ಲಿ ಯಾರಾದರೂ ಹೋಗುವಾಗ ಈ ಕೀಲಿ ಕೈಯನ್ನು ಮನೆಯಲ್ಲಿ ಇಡುವುದು ಬೇಡವೆಂದು, ದಿಂಬನ್ನು ಎತ್ತಿಕೊಂಡು ಹೋಗುತ್ತೇನೆ"

ಎಂದರು.

ಪದಬಂಧ 

ರಚನೆ - ಡಾ || ಎ ಎಸ್ ಚಂದ್ರಶೇಖರ ರಾವ್ 

ಜವವರಿ ಪದಬಂಧ ಉತ್ತರಗಳು 

1 ಮರುಕಳಿಸು 

2 ಹರುಷ 

3 ಹೇಳಿಕೆ 

1 ಅಪಾನವಾಯು 

2 ಜೂಪಾನ 

3 ಅವಾಚ್ಯ 

ಸರಿ ಉತ್ತರ ಬರೆದವರು : ಶ್ರೀಮತಿ ಸೌಮ್ಯ ನಾಗರಾಜ್ . ಅವರಿಗೆ ಅಭಿನಂದನೆಗಳು.

ಈ ಸಂಚಿಕೆಯ ಪದಬಂಧ 

         

A  - ಸುಳುಹುಗಳು 

1)ಕನ್ನಡದ ದೇವತೆ, ಶಕ್ತಿ ದೇವತೆ, ಆದಿಶಕ್ತಿ.

2)ಯಾಗ, ಯಜ್ಞ . 

3) ಅರಳೀ ಮರ , ಅರಣಿ 

 
 

  B- ಸುಳುಹುಗಳು 

1)ಹುಡುಗಾಟ, ಕುಚೋದ್ಯ .

2) ಸಂದು, ಬಿರುಕು .

3) ಜೀವಂತಿಕೆ, ಗ್ರಹಣಶಕ್ತಿ,ಅರಿವು, ಆತ್ಮ.

ವ್ಯಕ್ತಿ ಪರಿಚಯ - ಕುಮಾರಿ ದಿಶಾ ಪುರಾಣಿಕ್ 

ನಮ್ಮ ಬಡಾವಡೆಯಲ್ಲಿಯೇ  ಹುಟ್ಟಿಬೆಳೆದು , ಸಂಗೀತದ ನಾದಲೋಕದಲ್ಲಿ  ಪ್ರಜ್ವಲಿತ್ತಿರುವ ಬಹುಮುಖ ಪ್ರತಿಭೆ: ಕುಮಾರಿ ದಿಶಾ ಪುರಾಣಿಕ್ 

ಬೆಂಗಳೂರು: ಶಾಸ್ತ್ರೀಯ  ಮತ್ತು  ಸುಗಮ ಸಂಗೀತ -ಎರಡರಲ್ಲೂ ಸಮಾನ ಹಿಡಿತ ಸಾಧಿಸಿ, ತನ್ನ ಸುಮಧುರ ಗಾಯನದ ಮೂಲಕ ಕಲಾಭಿಮಾನಿಗಳ ಗಮನ ಸೆಳೆಯುತ್ತಿರುವ ಉದಯೋನ್ಮುಖ  ತಾರೆ, ಕುಮಾರಿ ದಿಶಾ ಪುರಾಣಿಕ್ . ಶ್ರೀ ಭಾರ್ಗವ್   ಪುರಾಣಿಕ್  ಮತ್ತು  ಶ್ರೀಮತಿ  ಪದ್ಮಜಾ ಪುರಾಣಿಕ್ ದಂಪತಿಗಳ ಪುತ್ರಿಯಾದ ಈಕೆ, ಆರು ವರ್ಷದ  ಪುಟ್ಟ ವಯಸ್ಸಿನಲ್ಲೇ  ಸಂಗೀತದತ್ತ ಆಕರ್ಶಿತರಾಗಿ , ಇಂದು ನಾಡಿನಾದ್ಯಂತ ಭರವಸೆಯ ಗಾಯಕಿಯಾಗಿ ಮೂಡಿಬಂದಿದ್ದಾರೆ.

ಬಾಲ್ಯದಿಂದಲೇ ಚಿಮ್ಮಿದ  ಪ್ರತಿಭೆ

ಚಿತ್ರ ಶೀರ್ಷಿಕೆ : ಶಾಲಾ ದಿನಗಳಲ್ಲೇ  ವೇದಿಕೆಯ ಮೇಲೆ ಗಾಯನ ಪ್ರದರ್ಶನ  ನೀಡುತಿರುವ ಬಾಲ ಪ್ರತಿಭೆ ದಿಶಾ ಪುರಾಣಿಕ್ .

ಸಂಗೀತವು, ದಿಶಾ ಅವರಿಗೆ ಜನ್ಮಜಾತವಾಗಿ ಬಂದಿರುವ ವರ ಎನ್ನಬಹುದು. ದಿಶಾ ಅವರ ಅಜ್ಜಿ  , ಶ್ರೀಮತಿ  ಮಧುರ ರಾಮಚಂದ್ರ ಪುರಾಣಿಕ್  ಕೂಡ ಸಂಗೀತ ಕ್ಷೇತ್ರದಲ್ಲಿ  ಸಾಧನೆ ಮಾಡಿದ್ದಲ್ಲದೆ, ಆಕಾಶವಾಣಿಯ ಮಾನ್ಯತೆ ಪಡೆದ ಗಾಯಕಿಯಾಗಿದರು. ಹೀಗಾಗಿ , ಇವರ ರಕ್ತದಲೇ ಸಂಗೀತದ ಸುಧೆ ಹರಿಯುತ್ತಿದ್ದು , ಬಾಲ್ಯದಲೇ ಆ ಪ್ರತಿಭೆ ಅನಾವರಣಗೊಂಡಿದೆ.

ದಿಶಾ ಅವರ ಸಂಗೀತ ಯಾನ ಆರಂಭವಾಗಿದ್ದು  ಶಾಲಾ ವೇದಿಕೆಗಳಿಂದ. ವಿದುಷಿ ಶ್ರೀಮತಿ ಗೌರಿ ಕುಲಕರ್ಣಿ   ಅವರ ಮಾರ್ಗದರ್ಶನದಲ್ಲಿ  ಬೆಳೆದ ಇವರು,   ಗಂಧರ್ವ ಮಹಾವಿದ್ಯಾಲಯದ ಮತ್ತು ಕರ್ನಾಟಕ ಬೋರ್ಡ್    ನಡೆಸುವ ಸಂಗೀತ ಜೂನಿಯರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ  (Distinction) ತೇರ್ಗಡೆಯಾಗಿದ್ದಾರೆ. ಪ್ರಸುತ ಸೀನಿಯರ್ ಪರೀಕ್ಷೆಗಾಗಿ , ಹಿಂದೂಸ್ತಾನಿ  ಶಾಸ್ತ್ರೀಯ ಮತ್ತು  ಸುಗಮ ಸಂಗೀತದ ತಾಲೀಮು ನಡೆಸುತ್ತಿದ್ದಾರೆ .

ದಾಸವಾಣಿಯ ದಿವ್ಯ ಪಯಣ ಮತು ಸ್ಟುಡಿಯೋ ರೆಕಾರ್ಡಿಂಗ್ 

ಚಿತ್ರ ಶೀರ್ಷಿಕೆ 

ಉಡುಪಿಯ ಪವಿತ್ರ ಕೃಷ ಮಠ ಮತ್ತು  ವಿವಿಧ ವೇದಿಕೆಗಳಲಿ ದಾಸವಾಣಿ ಸುಧೆ ಹರಿಸುತ್ತಿರುವ ದಿಶಾ ಪುರಾಣಿಕ್  ಮತ್ತು ತಂಡ.

ತಿರುಪತಿ, ಮಂತ್ರಾಲಯ , ಉಡುಪಿಯ ಕೃಷ್ಣ  ಮಠ, ಬೆಂಗಳೂರಿನ ಇಸ್ಕಾನ್  ದೇವಾಲಯ ಸೇರಿದಂತೆ ಹೈದರಾಬಾದ್ ನ  ಕಚೇಗುಡ ಹಾಗೂ ನಾಡಿನ ಪ್ರಮುಖ ಸಾಂಸಕೃತಿಕ ವೇದಿಕೆಗಳಲ್ಲಿ  ದಿಶಾ ಅವರ ದಾಸವಾಣಿ ಕಾರ್ಯಕ್ರಮಗಳು ಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲೂ  ಇವರ ಗಾಯನಕ್ಕೆ  ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು , ಹಲವಾರು ಪ್ರಶಸ್ತಿಗಳು  ಇವರನ್ನು  ಅರಸಿ ಬಂದಿವೆ.

ಇತ್ತೀಚೆಗೆ ಪ್ರಖ್ಯಾತ  'ನಂದಿ ವಾಹಿನಿ' (Nandi Vahini) ಯೂಟ್ಯೂಬ್  ಚಾನೆಲ್ಗಾಗಿ ದಾಸರ ಪದಗಳ ಹಾಡಿನ ಗುಚ್ಛವನ್ನು ರೆಕಾರ್ಡ್   ಮಾಡುವ ಮೂಲಕ ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪಿದ್ದಾರೆ .

ತಿರುಪತಿ ತಿರುಮಲದಲ್ಲಿ  'ಗಾಯನ ಸೇವೆ'

ಚಿತ್ರ ಶೀರ್ಷಿಕೆ 

ತಿರುಪತಿ ತಿರುಮಲ ದೇವಸ್ತಾನದ (TTD) ಸಹಸ್ರ ದೀಪಾಲಂಕಾರ ಸೇವೆಯಲ್ಲಿ  ಗಾಯನ ಸೇವೆ ಸಲ್ಲಿಸುತ್ತಿರುವ  ದಿಶಾ.

ಪ್ರತಿಷ್ಟಿತ  TTD ಆರ್ಟಿಸ್ಟ್ ಪಾನಲ್  ಸದಸ್ಯೆಯಾಗಿ ಆಯ್ಕೆಯಾಗಿರುವ ದಿಶಾ ಅವರು , ತಿರುಮಲದ ಸಹಸ್ರ ದೀಪಾಲಂಕಾರ ಸೇವೆಯಲ್ಲಿ ಹಾಡುವ ಮೂಲಕ ಶ್ರೀ ವೆಂಕಟೇಶ್ವರ ಸ್ವಾಮಿಗೆ ಗಾಯನ ಸೇವೆ ಅರ್ಪಿಸಿದಾರೆ. ಇವರ ಗಾಯನವು SVBC ವಾಹಿನಿಯ ಮೂಲಕ ಲಕ್ಷಾಂತರ ಭಕ್ತರನ್ನು  ತಲುಪಿದೆ.

ಗುರುಗಳ ಆಶೀರ್ವಾದ  ಮತ್ತು  ಆಕಾಶವಾಣಿ ಸಂದರ್ಶನ 

ಚಿತ್ರ ಶೀರ್ಷಿಕೆ : ಶ್ರೀ ಸತ್ಯಾತ್ಮ ತೀರ್ಥ ಗುರುಗಳಿಂದ ಆಶೀರ್ವಾದ ಪಡೆಯುತ್ತಿರುವ ದೃಶ್ಯ 

ಹೈದರಾಬಾದಿನ  ಕಚೇಗುಡದಲಿ ಶ್ರೀ ಉತ್ತರಾದಿ ಮಠದ ಪೀಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಗುರುಗಳಿಂದ ಇವರು ಪಡೆದ ವಿಶೇಷ ಆಶೀರ್ವಾದವು  ಇವರ ಸಾಂಸಕೃತಿಕ ಪಯಣಕ್ಕೆ   ಹೊಸ ಚೈತನ್ಯ ನೀಡಿದೆ.

ಇತ್ತೀಚೆಗೆ ಆಕಾಶವಾಣಿ ಧಾರವಾಡದ ಪ್ರಖ್ಯಾತ  'ಯುವವಾಣಿ' ಕಾರ್ಯಕ್ರಮದಲ್ಲಿ, ಇವರ ವಿಶೇಷ ವಿಶೇಷ ಸಂದರ್ಶನ ಪ್ರಸಾರವಗಿದ್ದು, ಇವರ ಸಾಧನೆಯ ಹಾದಿ ಯುವಜನತೆಗೆ ಸ್ಪೂರ್ತಿಯಾಗಿದೆ.

ನಮ್ಮ ಬಡಾವಣೆಯಲ್ಲಿ 

 

ನಮ್ಮ ಬಡಾವಣೆಯ 2024 ರ ರಾಮೋತ್ಸವದಲ್ಲಿ , ಕುಮಾರಿ ದಿಶಾ ಪುರಾಣಿಕ್  ಹಾಗೂ  ಅವರ ತಾಯಿ ಶ್ರೀಮತಿ ಪದ್ಮಜಾ ಪುರಾಣಿಕ್ ಅವರುಗಳು  ,ಅದ್ಭುತವಾಗಿ ಹಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು.

ಬಹುಭಾಷಾ ಗಾಯಕಿ ಮತು ಹಿನ್ನೆಲೆ  ಗಾಯನ ಹಾಗೂ ಚಲನಚಿತ್ರ ಗೀತೆ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು

ಚಿತ್ರಶೀರ್ಷಿಕೆ : ದಿಶಾ ಪುರಾಣಿಕ್  ಅವರು ಧ್ವನಿ ನೀಡಿರುವ "ನಿನೈವೇ" (Ninaive) ಬಹುಭಾಷಾ ಮ್ಯೂಜಿಕ್ ವಿಡಿಯೋ ಬ್ಯಾನರ್ 

ದಾಸ ಸಾಹಿತ್ಯದ ಜೊತೆಗೆ, ಚಲನಚಿತ್ರ ಗೀತೆ ಹಾಗೂ ಭಾವಗೀತೆಗಳಲ್ಲೂ  ದಿಶಾ ಅವರು ಅಪಾರ ಆಸಕ್ತಿ  ಹೊಂದಿದ್ದಾರೆ. ಖ್ಯಾತ ಗಾಯಕಿ ಶ್ರೀಮತಿ ಕಸ್ತೂರಿ ಶಂಕರ್ ಅವರ ಔತರಿ, ಶ್ರೀಮತಿ ಯಶಸ್ವಿನಿ  ಉಮೇಶ್ ಅವರ ಬಳಿ ಹಿನ್ನೆಲೆ  ಗಾಯನ (Playback Singing) ಕಲಿಯುತಿರುವ ಇವರು, ಈ ಕ್ಷೇತ್ರದಲ್ಲೂ  ಗಣನೀಯ ಸಾಧನೆ ಮಾಡುತ್ತಿದ್ದಾರೆ .

ಪ್ರಮುಖ ಮೈಲಿಗಲುಗಳು:

  •  ಹೆಸರಾಂತ ಕವಿಗಳ ಸಮ್ಮುಖದಲ್ಲಿ ಗಾಯನ: ಸುಗಮ ಸಂಗೀತ ಲೋಕದ ದೈತ್ಯ ಪ್ರತಿಭೆ, ದಿವಂಗತ ಡಾ. ಎಚ್.ಎಸ್. ವೆಂಕಟೇಶಮೂರ್ತಿ  (HSV) ಅವರ ಸಮ್ಮುಖದಲ್ಲಿ ಅವರ ಆಯ್ದ  ಕವನ ಗುಚ್ಚಗಳನ್ನು  ಹಾಡುವ ಮೂಲಕ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .

  • ಗಾನಗಂಧವ ಡಾ. ಪಿ.ಬಿ. ಶ್ರೀನಿವಾಸ್ ಅವರಿಗೆ ಗೌರವ: ಹಿರಿಯ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ (PBS) ಅವರ ಪುತ್ರನ ಸಮ್ಮುಖದಲ್ಲಿ, ಪಿ.ಬಿ.ಎಸ್ ಅವರು ಹಾಡಿರುವ ಅಮರ ಚಿತ್ರಗೀತೆಗಳನ್ನು  ಅತ್ಯಂತ ಸುಶ್ರಾವ್ಯವಾಗಿ ಪ್ರಸುತಪಡಿಸಿ, ಅವರ ಕುಟುಂಬದವರಿಂದ ತುಂಬು ಹೃದಯದ ಪ್ರಶಂಸೆ ಪಡೆದಿದ್ದಾರೆ.

  • ಬಹುಭಾಷಾ ಗಾಯಕಿ: ತಮಿಳು ಮತು ಕನ್ನಡ ಭಾಷೆಯ "ನಿನೈವೇ" (Ninaive) ಮ್ಯೂಸಿಕ್ ವಿಡಿಯೋಗೆ  ಧ್ವನಿ ನೀಡುವ ಮೂಲಕ ಹಿನ್ನೆಲೆ  ಗಾಯನ ಕ್ಷೇತ್ರಕ್ಕೆ  ಯಶಸ್ವಿಯಾಗಿ  ಪಾದಾರ್ಪಣೆ ಮಾಡಿದ್ದಾರೆ .

  • ಸ್ಟೇಜ್ ಷೋ ಗಳು: ಅನೇಕ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ಪ್ರತಿಷ್ಟಿತ ಸ್ಟೇಜ್ ಷೋಗಳಲ್ಲಿ 

    ಭಾಗವಹಿಸಿ, ಸೈ ಎನಿಸಿಕೊಂಡಿದಾರೆ.

ಶಿಕ್ಷಣದಲ್ಲೂ  ಅಗ್ರಪಂಕ್ತಿ

ಸಂಗೀತದಷ್ಟೇ  ಗಂಭೀರವಾಗಿ ಓದನ್ನೂ  ಪರಿಗಣಿಸಿರುವ ದಿಶಾ, ಎಲಾ ಬೋರ್ಡ್  ಪರೀಕ್ಷೆಗಲ್ಲಿ    ಶೇ. 94 ಕ್ಕಿಂತ ಅಧಿಕ ಅಂಕ ಗಳಿಸಿ ಸಾಧನೆ ಮಾಡಿದಾರೆ. ಸದ್ಯ ಎಂಕಾಂ (M. Com) ಮತ್ತು  ಸಿ.ಎಸ್ (Company Secretary) ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ .

ಕಲೆ ಮತ್ತು ಶಿಕ್ಷಣದ ಸಮತೋಲನ ಕಾಯ್ದುಕೊಂಡಿರುವ ಕುಮಾರಿ ದಿಶಾ ಪುರಾಣಿಕ್ ಅವರ ಮುಂದಿನ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂಬುದು ಎಲ್ಲಾ ಕಲಾಪ್ರೇಮಿಗಳ ಹಾರೈಕೆಯಾಗಿದೆ

ಕಥೆ, ಕವನ .. ವಿಭಾಗ - ಫೆಬ್ರವರಿ 2026

ಅಜ್ಜಿಮನೆ - ಭಾಗ 3

ಅಂದು ಭಾನುವಾರ, ಹುಡುಗರಿಗೆ ಬಹಳ ಸಂತಸ. ಏಕೆಂದರೆ ತಾತನವರು ದೂರದ ದೊಡ್ಡ ತೋಟಕ್ಕೆ ಅವರನ್ನು ಕರೆದುಕೊಂಡು ಹೋಗುವವರಿದ್ದರು . ಅದು ನಡಿಗೆ ದೂರವಾದ್ದರಿಂದ ಹಾಗೂ ತೋಟವು ದೊಡ್ಡದಿದ್ದರೆ ಎತ್ತಿನ ಬಂಡಿಯನ್ನು ವ್ಯವಸ್ಥೆ ಮಾಡಿದ್ದರು

 ಎತ್ತಿನ ಬಂಡಿ ಬಂದು ಮನೆ ಮುಂದೆ ನಿಂತಾಗ ಹುಡುಗರಿಗೆ ಸಂಭ್ರಮವೋ ಸಂಭ್ರಮ. 

ತುಂಟ ಸೀನ, ಅದನ್ನು ಧಡಾರನೆ ಹತ್ತಲು ಹೋದಾಗ, ಬಂಡಿ ಹಿಂದಕ್ಕೆ ವಾಲಿತು. 

ತಾತ ಹೇಳಿದರು:ಅದನ್ನು  ಹತ್ತುವುದು ಹಾಗಲ್ಲ.

ಅದನ್ನು ಹೇಗೆ ಹತ್ತುವುದೆಂದು ಕೊನೆಗೂ ತಿಳಿದು, ಒಬ್ಬೊಬ್ಬರಾಗಿ ಹತ್ತಿದರು. ತಾತ ಅದರಲ್ಲಿ ಕೂತಾಗ ಬಂಡಿಯವನು ಅದನ್ನು ಹೊಡೆದುಕೊಂಡು ಹೋಗುವುದಕ್ಕೆ ಮುಂದಾದನು. ಹುಡುಗರು ಅಜ್ಜಿ ಬರುವುದಿಲ್ಲವೇ ಎಂದರು.

 ಅಜ್ಜಿ, ಮನೆಯಲ್ಲಿ ಅಡುಗೆ ಮಾಡಿ ನೀವು, ಬರುವ ವೇಳೆಗೆ ಊಟವನ್ನು ತಯಾರು ಮಾಡಬೇಡವೇ ? ಅದಕ್ಕೇ ಅಜ್ಜಿ ಬರುವುದಿಲ್ಲ ಎಂದು ತಾತ ಹೇಳಿದರು.

 ಬಂಡಿಯಲ್ಲಿ ಸಾಗುತ್ತಿದ್ದಾಗ ಹುಡುಗರಿಗೆ ಏನೋ ಬಹಳ ದೊಡ್ಡ ವಿಮಾನದಲ್ಲಿ ಹೋಗುವಷ್ಟು ಖುಷಿಪಡುತ್ತಿದ್ದರು. ಅದು ಆಗಾಗ ದಡ ದಡ ಅಲ್ಲಾಡಿದರೂ ಅವರಿಗೆ ಏನೋ ಸಂಭ್ರಮ ಮತ್ತು ಖುಷಿ. ಹೊಲದ ಮಣ್ಣುಗಳಲ್ಲಿ ಅದು ಹೋಗುವಾಗ ಅವರಿಗೆ ಆಶ್ಚರ್ಯ. ಕೊನೆಗೂ ತಾತನ ಹೊಲ ತಲುಪಿ ಎಲ್ಲರೂ ಇಳಿದರು.

 ಮಕ್ಕಳು ಬಂಡಿಯ ಬಗ್ಗೆ ಅತ್ಯಂತ ಉತ್ಸಾಹದಿಂದ ಹೊಗಳಿದ್ದನ್ನು ನೋಡಿ ತಾತನವರು ಕೇಳಿದರು ಊರಿನಲ್ಲಿ ನಿಮ್ಮ ಬಳಿ ಅಷ್ಟು ಚೆನ್ನಾಗಿರುವ ಕಾರಿನಲ್ಲಿ ಹೋಗುವುದಕ್ಕಿಂತ ನಿಮಗೆ ಇದು ಮಜವೇ?ಎಂದು ಕೇಳಿದಾಗ,ಹುಡುಗರು ಆ ಕಾರಿನಲ್ಲಿ ಹೋಗುವ ಮಜವೇ ಬೇರೆ, ಬಂಡಿಯಲ್ಲಿ ಹೋಗುವ ಮಜವೇ ಬೇರೆ ಎಂದು ಹೇಳಿದರು.

 ಆ ದೊಡ್ಡ ಹೊಲದಲ್ಲಿ ಅನೇಕ ರೀತಿಯ ಹೂ ಗಿಡಗಳು, ತರಕಾರಿ ಗಿಡಗಳನ್ನು ತಾತನವರು ಮಕ್ಕಳಿಗೆ ಪರಿಚಯಿಸಿದರು. ನಂತರ ಅಲ್ಲಿಯೇ ಇದ್ದ ಇನ್ನೊಂದು ಮಾವಿನ ತೋಟಕ್ಕೆ ಮತ್ತೆ ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಹೋದರು.

 ಅಲ್ಲಿ ಹುಡುಗರಿಗೆ ಅನೇಕ ಮಾವನ ಹಣ್ಣುಗಳನ್ನು ನೀಡಲಾಯಿತು.ಅವರು ಅಲ್ಲಿಯೇ ಅದನ್ನು ತೊಳೆದು ಕಚ್ಚಿ ತಿಂದರು.

ನಂತರ ಈ ವಾಟೆಯನ್ನು ಹಾಕುವುದು ಹೇಗೆ

ಇದರಿಂದ ಗಿಡ ಹೇಗೆ ಬರುತ್ತದೆ ?

ಅದು ಎಷ್ಟು ವರ್ಷಕ್ಕೆ ಮರವಾಗಿ ಹಣ್ಣು ಬಿಡುತ್ತದೆ?

ಒಂದು ವರ್ಷಕ್ಕೆ ಎಷ್ಟು ಹಣ್ಣು ಬಿಡುತ್ತದೆ ?ಎಂದು ಅನೇಕ ಪ್ರಶ್ನೆಗಳ ಸುರಿಮಳೆಗೆ ತಾತನವರು ಹಾಗೂ ಅಲ್ಲಿದ್ದ ರೈತರು ಸುಧೀರ್ಘವಾಗಿ ಸಮಾಧಾನದಿಂದ ಮಕ್ಕಳಿಗೆ ಅರ್ಥವಾಗುವಂತೆ ಎಲ್ಲವನ್ನು ತೋರಿಸಿ ವಿವರಿಸಿದರು.

 ಹುಡುಗರು ಮತ್ತೆ ಬಂಡಿ ಹತ್ತಿ ಮನೆಗೆ ಬಂದು ಎಲ್ಲವನ್ನು ಅಜ್ಜಿಗೆ ಹೇಳಿದರು.

 ಅವರು ತಮ್ಮ ತಂದೆ ತಾಯಿಗಳಿಗೆ ಈ ವಿಚಾರವನ್ನು ತಿಳಿಸಬೇಕೆಂದು ತಾತನ ಫೋನಿನಲ್ಲಿ ಅವರಿಗೆ ಕರೆ ಮಾಡಿ ಒಬ್ಬೊಬ್ಬರಾಗಿ ಎಲ್ಲರೂ ಎಲ್ಲ ವಿಚಾರವನ್ನು ತಿಳಿಸುತ್ತಾ ಬಂಡಿಯಲ್ಲಿ ಹೋಗುವ ಮಜವೇ ಮಜ ಎಂದು ಹೇಳಿದರು.

ಅಧ್ಯಾತ್ಮ ವಿಭಾಗ - ಫೆಬ್ರವರಿ 2026.

ಡಾ || ನಾಗೇಶ್ ಎಲ್ ( ದಂತ ವೈದ್ಯರು ) ಅವರು, ಈ ವಿಭಾಗಕ್ಕೆ  , ಪ್ರತಿ ತಿಂಗಳೂ , ಶ್ರೀ  ಡಿ ವಿ ಗುಂಡಪ್ಪ ನವರ " ಮಂಕುತಿಮ್ಮನ ಕಗ್ಗ" ದ ಒಂದೊಂದು ಪದ್ಯಕ್ಕೆ ವಿವರಣೆ ಕೊಡಲು ಒಪ್ಪಿದ್ದಾರೆ . ಆವರಿಗೆ ನನ್ನ ಧನ್ಯವಾದಗಳು .

ಮಂಕುತಿಮ್ಮನ ಕಗ್ಗದ ಜೀವನ ಸಂದೇಶ

ಡಿವಿಜಿ ಅಂದರೆ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ,  ಕನ್ನಡ ಸಾಹಿತಿಗಳು ಅದ್ಭುತ ಕೃತಿಗಳನ್ನು ರಚಿಸಿದ್ದಾರೆ ಸರಳ ಜೀವನ ಉನ್ನತ ಯೋಜನೆಗಳನ್ನು ಜೀವನದಲ್ಲಿ ರೂಡಿಸಿಕೊಂಡಿದ್ದ ಮಹಾನ್ ಚೇತನ.ಅವರು ಅತ್ಯಂತ ಪ್ರಾಮಾಣಿಕ ಜೀವನವನ್ನು ನಡೆಸಿ, ಇತರರಿಗೆ ಮಾದರಿಯಾಗಿದ್ದರು. 

ಕ್ರಿ.ಶ 1948ರಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಪ್ರಾರಂಭಿಸಿ, ಸಮಾಜದ ಸುಧಾರಣೆಯಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡರು. ಆ ಸಂಸ್ಥೆಯ ಆಶಯವೆಂದರೆ, "ಸಾರ್ವಜನಿಕ ಜೀವನವನ್ನು ಆಧ್ಯಾತ್ಮಿಕರಣ ಗೊಳಿಸುವುದು" .ಎಂತಹ ಉದಾತ್ತ ಗುರಿ ಅವರದು! ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ದಿವ್ಯ ಔಷಧಿ ಈ  ಆಶಯದಲ್ಲಿ ಅಡಗಿದೆಯಲ್ಲವೇ ?

 ಡಿವಿಜಿಯವರು ಒಟ್ಟು 945 ಕಗ್ಗ ಗಳನ್ನು ಮಂಕುತಿಮ್ಮನ ಕಗ್ಗ ಎಂಬ ಹೆಸರಿನಲ್ಲಿ ಬರೆದಿದ್ದಾರೆ. ಈ ಕಗ್ಗಗಳು, 4 ಸಾಲಿನ ಮುಕ್ತಕಗಳು. ತತ್ವ ಪ್ರಧಾನವಾದ, ಆಳ ಅರ್ಥವನ್ನು ಹೊಂದಿದ, ಜೀವನಕ್ಕೆ ಮಹತ್ತರವಾದ ಸಂದೇಶವನ್ನು ನೀಡುವ ಈ ಕಗ್ಗಗಳು, ಅವರ ಅನುಭವ ಮತ್ತು ಅನುಭಾವಗಳ ಸಮ್ಮಿಳಿತದಿಂದ ಮೂಡಿಬಂದಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಹೇಳಬಹುದು.

 ಈ ಕಗ್ಗಗಳಿಂದ ಕೆಲವನ್ನು ಆರಿಸಿಕೊಂಡು, ಅವುಗಳ ಸಂಕ್ಷಿಪ್ತ ಸಾರಾಂಶವನ್ನು ನಿಮಗೆ ನೀಡುವ ಒಂದು ಪ್ರಯತ್ನವನ್ನು ಈ ಸರಣಿ ಲೇಖನಗಳಲ್ಲಿ ನಾನು ಮಾಡುತ್ತೇನೆ.

 ಸೃಷ್ಟಿ, ಸೃಷ್ಟಿಕರ್ತ, ಮನುಷ್ಯರು ,ಜೀವನ, ಮರಣ -ಇವುಗಳ ಬಗ್ಗೆ ಆಳವಾದ ವಿಚಾರಗಳನ್ನು ಗುಂಡಪ್ಪನವರು ಕಗ್ಗಗಳ ಮೂಲಕ ,ನಮ್ಮೊಡನೆ ಹಂಚಿಕೊಂಡಿದ್ದಾರೆ. ಆ ಕಗ್ಗಗಳು ನಮ್ಮನ್ನು ಚಿಂತನೆಗೆ ಹಚ್ಚಿ , ಪ್ರಜ್ಞೆಯ ಆರೋಹಣವನ್ನು ಉಂಟುಮಾಡಲಿ ಎಂದು ಆಶಿಸುತ್ತಾ 

-ನಿಮ್ಮ ಡಾ|| ನಾಗೇಶ್ ಎಲ್

ಕಗ್ಗ -1

ಇಹುದೊ ಇಲ್ಲವೊ ತಿಳಿಯಗೊಡದ-ದೊಂದು

ನಿಜಮಹಿಮೆಯಿಂ ಜೀವವೇಷದಲಿ ಜಗವಾಗಿ |

ವಿಹರಿಪುದು ಅದೊಳ್ಳಿತೆಂಬುದು ನಿಸದವಾದೊಡೆ

ಆ ಗಹನತತ್ತ್ವಕೆ ಶರಣೊ - ಮಂಕುತಿಮ್ಮ || 

 ಏನನ್ನು ನಾವು ಭಗವಂತನೆಂದು ಅಂದುಕೊಳ್ಳುತ್ತೇವೋ, ಅದು ನಮ್ಮ ಇಂದ್ರಿಯಗಳಿಗೆ, ಮನಸ್ಸಿಗೆ , ನಿಲುಕದ ಒಂದು ತತ್ವವಾಗಿ ಇದೆ. ಅದು ಇದೆಯೋ ಇಲ್ಲವೋ ಎಂದು ನಮ್ಮ ಪ್ರಜ್ಞೆಗೆ ಈ ಹಂತದಲ್ಲಿ ತಿಳಿಯಲಾಗದಾಗಿದೆ.

 ಆದರೆ, ಆ ತತ್ವ ತನ್ನ ಮಹಿಮೆಯಿಂದ, ವ್ಯಕ್ತ ಪ್ರಪಂಚವಾಗಿ ಮತ್ತು ಆ ಪ್ರಪಂಚದಲ್ಲಿ ನಾನಾ ವೇಶಗಳನ್ನು ಧರಿಸಿದ ಜೀವಿಗಳಾಗಿ ವಿಹರಿಸುತ್ತಿದೆ .ಅಂದರೆ ಭಗವಂತನ ವ್ಯಕ್ತ ರೂಪವೇ ಈ ಅಖಿಲಾಂಡ ಕೋಟಿ ಬ್ರಹ್ಮಾಂಡ.

ಸೃಷ್ಟಿಯನ್ನು ಮಾಡಿ ಭಗವಂತ ದೂರ ಎಲ್ಲೂ ಹೋಗಿ ಅಡಗಿ ಕುಳಿತಿಲ್ಲ . ಸೃಷ್ಟಿಯ ಅಣು ರೇಣು ತೃಣ ಕಾಷ್ಟದಿಗಳಲ್ಲಿ ದಿವ್ಯ ಸ್ಪಂದನಗಳು ಅಡಗಿ ಕುಳಿತಿದ್ದಾನೆ.

 ನಾನಾ ಜೀವಿಗಳಲ್ಲಿ ನಾನಾ ರೂಪಗಳಲ್ಲಿ  ಒಳಿತೆಂಬ  ರೂಪದಲ್ಲಿ ವಿಹರಿಸುತ್ತಾ ಇದೆ, ಆ ದಿವ್ಯಶಕ್ತಿ.

 ವಿಜ್ಞಾನದ ಪ್ರಕಾರ. ಈ ಜಗತ್ತಿನಲ್ಲಿ ಎಲ್ಲವೂ ಅಣುಗಳಿಂದ ಮಾಡಲ್ಪಟ್ಟಿದೆ .ಪ್ರತಿ ಅಣುವೂ  ನಿರಂತರವಾಗಿ ಕಂಪಿಸುತ್ತಿದೆ. ಆ ಕಂಪನಗಳಿಗೆ ಕಾರಣವೇನೆಂದರೆ, ಅದರಲ್ಲಿ ಅಡಗಿರುವ  ಚೈತನ್ಯವೇ ಆಗಿದೆ. ಆ ಚೈತನ್ಯವನ್ನೇ ನಾವು ಭಗವಾನ್, ಭಗವಂತನೆಂದು ಭಾವಿಸುತ್ತೇವೆ . ಸರ್ವಶಕ್ತ ಪರಮಾತ್ಮ , ಜಗತ್ತಿನಲ್ಲಿ ಸರ್ವ ವ್ಯಾಪ್ತಿಯಾಗಿದ್ದಾನೆಂದು ಎಂಬುದು ನಮಗೆ ನಿಶ್ಚಿತವಾದ ಮೇಲೆ , ಆ ಗಹನವಾದ ಪರತತ್ವಕ್ಕೆ ನಾವು ಶರಣಾಗಬೇಕು ಎಂಬುದು ಗುಂಡಪ್ಪನವರ ಅಭಿಮತ.

 ಶರಣಾಗತಿ ಎಂಬುದು ಒಂದು ಬಹುಮುಖ್ಯ ಪ್ರಕ್ರಿಯೆ .ಎಲ್ಲಿಯವರೆಗೆ ದೇಹತ್ಮಜ್ಞಾನದ ಬೆಳಕನ್ನು ಹೊಂದಿ, ಪರಮಾತ್ಮನಿಗೆ ಶರಣಾಗುವುದಿಲ್ಲವೋ, ಅಲ್ಲಿಯವರೆಗೆ ಮುಕ್ತಿ ಇಲ್ಲ. ಸತ್ಯಕ್ಕೆ ಶರಣಾಗುವುದು ಸಾಧಕನ ಲಕ್ಷಣ. ಅರ್ಜುನ (ನರ) ಶ್ರೀ ಕೃಷ್ಣ (ನಾರಾಯಣ)ನಿಗೆ ಶರಣಾಗುವ ತನಕ,  ಗೀತೋಪದೇಶ  ಪ್ರಾರಂಭವಾಗುವುದಿಲ್ಲ ಅಲ್ಲವೇ? 

ಮುಂಡುವರೆಯುವುದು ...

 
 

ಡಾ|| ನಾಗೇಶ್ ಎಲ್ ಅವರ ಮನೆಯಲ್ಲಿ , ಒಂದು ದಿನದ ಸತ್ಸಂಗ , ದಿನಾಂಕ 20/12/2025 ರ ಶನಿವಾರ ನಡೆಯಿತು. ಅದರ ವಿಡಿಯೋ ಗಳನ್ನು ನೀವು , ಈ ಕೆಳಗಿನ ಲಿಂಕ್ ಗಳನ್ನು ಒತ್ತಿ, ಕೇಳಬಹುದು.

ಭಾಗ-1

[embed]https://youtu.be/wX2cQC0jCq4?si=joHb8JER7HV623Lq[/embed]

ಭಾಗ-2

[embed]https://youtu.be/SVBvPtOpVfk?si=T9rNLcWKuYwV5tm4[/embed]

ಭಾಗ-3

[embed]https://youtu.be/Q03t8z4A444?si=3dCdXSYJVrvadNRR[/embed]

ಭಾಗ -4

[embed]https://youtu.be/2BIrzNYHe3Y?si=L4FTArVjCdSproKL[/embed]

ಭಾಗ - 5

[embed]https://youtu.be/IbCfP3GxQMI?si=cVSvPtGwOiwzXjJV[/embed]
 

ಸಂಸ್ಕೃತ ಶ್ಲೋಕ - ಅರ್ಥ

ಲೇಖಕರು : ಶ್ರೀ ಸುಬ್ಬಣ್ಣ ಆರಾಧ್ಯ 

 ಸುಖಾರ್ಥಿನಃ ಕುತೋ ವಿದ್ಯಾ ಕುತೋ ವಿದ್ಯಾರ್ಥಿನಃ ಸುಖಮ್‌ ।

ಸುಖಾರ್ಥೀ ವಾ ತ್ಯಜೇದ್ವಿದ್ಯಾಂ ವಿದ್ಯಾರ್ಥೀ ವಾ ತ್ಯಜೇತ್‌ ಸುಖಮ್‌ ।।

 ಸುಖ ಬಯಸುವವನಿಗೆ ವಿದ್ಯೆ ಇರುವುದಿಲ್ಲ ವಿದ್ಯೆ ಬಯಸುವವನಿಗೆ ಸುಖವಿರುವುದಿಲ್ಲ. ಸುಖ ಬಯಸುವವನು ವಿದ್ಯೆಯನ್ನು ವರ್ಜಿಸಬೇಕು ವಿದ್ಯೆ ಬಯಸುವವನು ಸುಖವನ್ನು ವರ್ಜಿಸಬೇಕು.

ವಯಂ ಪಂಚಾಧಿಕಂ ಶತಂ

 ಮಹಾಭಾರತದಲ್ಲಿ ಧರ್ಮರಾಯ ಪಾಂಡವರಿಗೆ ಹೇಳಿದ ಬುದ್ಧಿವಾದ. ಇದು ಇಂದಿನ ರಾಜಕೀಯದಲ್ಲಿ ರಾಷ್ಟ್ರ ಹಿತವನ್ನೇ ಮರೆತು ಪರಸ್ಪರ ವಹಿಸಿ ಸಮಯದಲ್ಲಿ ತೊಡಗಿರುವವರಿಗೆ ಒಂದು ದಾರಿದೀಪ.

 ಸಂದರ್ಭ: ಪಾಂಡವರು ವನವಾಸದಲ್ಲಿ ಇದ್ದಾಗ ಕೌರವರು ಅವರನ್ನು ಹುಡುಕಿದರೆ, ಮತ್ತೆ 14 ವರ್ಷ ವನವಾಸಕ್ಕೆ ಕಳಿಸಿ ಬಹುದೆಂದು ದುರುಳ ದುರ್ಯೋಧನನ ಸೈನ್ಯ ಅವರನ್ನು ಹುಡುಕಿಕೊಂಡು ಬರುತ್ತಿರುವಾಗ ದಾರಿ ತಪ್ಪಿ ಯಕ್ಷನ ಪ್ರದೇಶಕ್ಕೆ ಪ್ರವೇಶಿಸುತ್ತಾರೆ.

 ಯಕ್ಷರು ಯುದ್ಧದಲ್ಲಿ ದುರ್ಯೋಧರನಾದಿಗಳನ್ನು ಮಣಿಸಿ ದುರ್ಯೋಧನನನ್ನು ಕಟ್ಟಿ ಹಾಕುತ್ತಿರುವಾಗ ಒಬ್ಬ ಕೌರವ ಸೈನಿಕನು ಪಾಂಡವರ ಇರುವ ಜಾಗವನ್ನು ಹುಡುಕಿಕೊಂಡು ಬಂದು ಕೌರವರನ್ನು ರಕ್ಷಿಸಬೇಕೆಂದು ಬೇಡುವ ಸಂದರ್ಭ.

 ಆಗ ಉಳಿದ ಪಾಂಡವರು ಧರ್ಮರಾಯನಿಗೆ ನೀನು ಅವರನ್ನು ರಕ್ಷಿಸಕೂಡದು ನಾವೀಗಾಗಲೇ ಸಾಕಷ್ಟು ಕಷ್ಟ ಪಡುತ್ತಾ ಮಾರುವೇಶದಲ್ಲಿರುವಾಗ ಏಕೆ ರಕ್ಷಿಸಬೇಕು.

 ಅದಕ್ಕೆ ಧರ್ಮರಾಯನ ಸಮಜಾಯಿಸಿ:

 ಇದು ನಮ್ಮ ದೇಶದ ಮರ್ಯಾದೆ ಪ್ರಶ್ನೆ. ನಮ್ಮಲ್ಲೇ ನಾವು ಐದು ಮಂದಿ. ಆದರೆ ಬೇರೆಯವರ ಮುಂದೆ ನಾವು 100 ಮಂದಿ ಮೇಲೆ ಐದು. ಆದ್ದರಿಂದ, ಹೋಗಿ ಬಿಡಿಸಿ ಎಂದು ಆಜ್ಞಾಪಿಸಿದನು. ಪಾಂಡವರು ಹೋಗಿ ಕೌರವವನ್ನು ಅವರ ದೇಶಕ್ಕೆ ತೆರಳಲು ನೆರವಾದರು . ಇದು ಇಂದಿನ ದೇಶದ ರಾಜಕೀಯದಲ್ಲಿ, ದೇಶದ ಯಶಸ್ಸನ್ನೇ ತ್ಯಾಗ ಮಾಡಿ, ಬೇರೆ ದೇಶದ ಶತ್ರುಗಳ ಜೊತೆ ಮನಬಂದಂತೆ ಹೇಳಿಕೆ ಕೊಡುತ್ತಿರುವ ರಾಜಕೀಯ ವ್ಯಕ್ತಿಗಳಿಗೆ ಒಂದು ಪಾಠವಾಗಬೇಕು. ದೇಶವೇ ಮುಖ್ಯ ಹೊರತು ರಾಜಕೀಯ ವೈಮನಸ್ಯಗಳಲ್ಲ ಎಂದು ತಿಳಿಯಬೇಕು. ಇದಕ್ಕೆ ಹಿಂದೆ ಕೇರಳದ ಪ್ರಾಂತ್ಯದಲ್ಲಿ ಕ್ರಿಶ್ಚಿಯನ್ ಜಡ್ಜ್ ಒಬ್ಬರು ಸಂಸ್ಕೃತವನ್ನು ಕಲಿಯಲು ಬ್ರಾಹ್ಮಣರಂತೆ ವೇಷ ಹಾಕಿಕೊಂಡು ಬಂದು ಪಂಡಿತರೊಬ್ಬರ ಮುಂದೆ ಭಾರತ್ ಮಹಾಭಾರತವನ್ನು ಓದಿ ಕಲಿತಿರುವುದು ಸಾಕ್ಷಿಯಾಗಿದೆ. ಭಗವದ್ಗೀತೆ ಯಂತಹ ಕೃತಿಗಳು ಬೇರೆಲ್ಲೂ ಸಿಗುವುದಿಲ್ಲವೆಂಬುದು ಗೊತ್ತಿದ್ದರೂ ಕೂಡ ಇದರ ಅಧ್ಯಯನಗಳನ್ನು ಶಾಲೆಯಲ್ಲಿ ಹೇಳಿಕೊಡಲು ವಿರೋಧ ಬರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ

 ಮುಂದಿನ ಸಂಚಿಕೆಯಲ್ಲಿ ಕುಂಭಕರ್ಣನ ದೇಶಭಕ್ತಿ ಎಂಬುದನ್ನು ಪರಿಚಯಿಸಲಾಗುವುದು

ಚಿತ್ರ ಕಲಾ ವಿಭಾಗ -ಫೆಬ್ರವರಿ-2026

ಈ ಎಲ್ಲಾ ಚಿತ್ರಗಳನ್ನೂ ಶ್ರೀ ಜಯರಾಂ ಕೆ ವಿ ಅವರು ರಚಿಸಿದ್ದಾರೆ ಮತ್ತು ಕೆಲವು ವಿವರಗಳನ್ನು ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವವದಾಗಳು 

ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ

 
 

ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 53 ಶತಕಗಳನ್ನು ಗಳಿಸಿದ್ದಾರೆ. ಇದು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರನ್ನು ಎರಡನೇ ಸ್ಥಾನದಲ್ಲಿ ಬಿಟ್ಟು ಹೊಸ ವಿಶ್ವ ದಾಖಲೆಯಾಗಿದೆ. ಇಬ್ಬರನ್ನೂ ಕ್ರಿಕೆಟ್‌ನ 'ದೇವರು' ಎಂದು ಪರಿಗಣಿಸಲಾಗುತ್ತದೆ. ಕೊಹ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದಾಗ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯುವ ಸಾಧ್ಯತೆಯಿದೆ.

 
 

ಕೆ.ವಿ. ಪುಟ್ಟಪ್ಪ (1904-1994) 1967 ರಲ್ಲಿ ತಮ್ಮ ಮಹಾಕಾವ್ಯ 'ರಾಮಾಯಣ ದರ್ಶನಂ' ಗಾಗಿ ಕರ್ನಾಟಕದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಸಾಹಿತ್ಯಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯೂ ಸಿಕ್ಕಿದೆ. ಅವರನ್ನು ಕುವೆಂಪು ಮತ್ತು ರಾಷ್ಟ್ರ ಕವಿ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿರುವ ಅವರ ಮನೆ ಈಗ ವಸ್ತುಸಂಗ್ರಹಾಲಯವಾಗಿದೆ ಮತ್ತು ಕನ್ನಡ ಸಾಹಿತ್ಯ ಪ್ರಿಯರಿಗೆ ಖಂಡಿತವಾಗಿಯೂ ಭೇಟಿ ನೀಡಲು ಯೋಗ್ಯವಾಗಿದೆ.

 
 

ಸುಂದರವಾದ ಗುನುಗುವ ಹಕ್ಕಿ (ಹಮ್ಮಿಂಗ್ ಬರ್ಡ್ )  

 
 

ಪಂಜಾಬಿನ ಸುಂದರ ಮಹಿಳೆ

 
 

40 ನೇ ವಯಸ್ಸಿನಲ್ಲಿ ಕೊನೆಯ ವಿಶ್ವಕಪ್ ಆಡುತ್ತಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ, ಒಂದು ಶತಕೋಟಿ ಅಭಿಮಾನಿಗಳಿಂದ ಪ್ರೀತಿಸಲ್ಪಡುವ, ಇತ್ತೀಚೆಗೆ ಭಾರತಕ್ಕೆ 3 ದಿನಗಳ ಭೇಟಿಗಾಗಿ 89 ಕೋಟಿ ರೂ. ಶುಲ್ಕ ವಿಧಿಸಿದ್ದಾರೆ ಎಂದು ವರದಿಯಾಗಿದೆ.

92 ವರ್ಷದ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಅವರ ಭಾವಚಿತ್ರ ಇಲ್ಲಿದೆ. ಅವರು ಈ  ವಯಸ್ಸಿನಲ್ಲೂ  ಇನ್ನೂ ಸಕ್ರಿಯರಾಗಿದ್ದಾರೆ ಮತ್ತು ಸಂದರ್ಶನಗಳನ್ನು ನೀಡುತ್ತಿದ್ದಾರೆ

 ಜಲಪಾತದ ಭೂದೃಶ್ಯ

 
 

'ಮಳೆಗಾಲದ ' ಅಮೂರ್ತ ಕಲೆಯ ಒಂದು ರೂಪ.

 
 

 83 ನೇ ವಯಸ್ಸಿನಲ್ಲಿ ಅಮಿತಾಭ್, ಕೆಬಿಸಿ ನಿರೂಪಕನಾಗಿ, ಮೆಗಾ ಸ್ಟಾರ್, ಭಾರತ ರತ್ನ ಅಭ್ಯರ್ಥಿಯಾಗಿ ಮತ್ತು ಇನ್ನೂ ವರ್ಷಕ್ಕೆ 100 ಕೋಟಿಗೂ ಹೆಚ್ಚು ಗಳಿಸುತ್ತಿದ್ದಾರೆ.

ಇದು ತನ್ನ ಗುಡಿಸಲಿನ ಹೊರಗೆ ವೈಯಕ್ತಿಕ ಅಗತ್ಯಗಳಿಗಾಗಿ ಲ್ಯಾಂಟರ್ನ್ ಹಿಡಿದಿರುವ ಹಳ್ಳಿ 

ಈಷ್ಟೊಂದು ಚಿತ್ರಗಳನ್ನು ರಚಿಸಿರುವ ಶ್ರೀ ಜಯರಾಂ ಕೆ ವಿ ಅವರ ಕಲೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಸುದ್ದಿ  ವಿಭಾಗ - ಫೆಬ್ರವರಿ -2026

ಶತಾವಧಾನಿ ಆರ್ ಗಣೇಶ ಅವರಿಗೆ , ಇದೇ ಜನವರಿ 25 ರಂದು, ನಮ್ಮ ದೇಶದ ಅತಿದೊಡ್ಡ ಪ್ರಶಸ್ತಿಯಾದ " ಪದ್ಮ ವಿಭೂಷಣ " ಪ್ರಶಸ್ತಿ ನೀಡಲಾಯಿತು .

ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.

 
 

ಜನವರಿ 26 ರಂದು, ನಮ್ಮ ಬಡಾವಣೆಯ ಉದ್ಯಾನ ವಂದಲ್ಲಿ, ವಿಧಾನ ಸಭೆಯ ಮಾನ್ಯ ಸದಸ್ಯ ಶ್ರೀ ಎಂ ಕೃಷ್ಣಪ್ಪನವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು

ಅಂದು ಸಂಜೆ, ಸಾರೆಗಮಪ ಕಲಾವಿದರಿಂದ ಸಂಗೀತ ಕರ್ಯಕ್ರಮವಿತ್ತು 

[playlist type="video" ids="2489"]

Comments

Popular posts from this blog

ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ

ನವೆಂಬರ್ ಸಂಚಿಕೆ

ಪ್ರತಿಭಾ ಪತ್ರಿಕೆ - ಜುಲೈ 2025