ನವೆಂಬರ್ ಸಂಚಿಕೆ

 

ಪ್ರತಿಭಾ ಪತ್ರಿಕೆ - ನವೆಂಬರ್   2025 


ಸಂಪಾದಕರ ಬರಹ 

ದೊಡ್ಡ ಲೇಖನಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯಕ್ತಿ ಪರಿಚಯದಲ್ಲಂತೂ ಪೂರ್ತಿಯಾಗಿ ಓದುತ್ತಿಲ್ಲದ ಕಾರಣ ವ್ಯಕ್ತಿ ಪರಿಚಯವನ್ನು ಇನ್ನೂ ಸಂಕ್ಷಿಪ್ತವಾಗಿ ಈ ಸಂಚಿಕೆಯಿಂದ ಹಾಕಲಾಗುತ್ತದೆ. ದಯವಿಟ್ಟು ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ. ಬಹುಮಾನವನ್ನು 250 ರೂ ಗಳಿಂದ 500 ರೂ ಗಳಿಗೆ ಹೆಚ್ಚಿಸಲಾಗಿದೆ. ಬಹುಮಾನದ ವಿಲ್ಲದ ಸ್ಪರ್ಧೆಗಳು ಸ್ವಾರಸ್ವಕರವಾಗಿರುತ್ತದೆ. ಆದ್ದರಿಂದ ಅದರಲ್ಲಿಯೂ ಭಾಗವಹಿಸಿ.  ನೀವೇ ಬರೆದ ಕಥೆ ಕವನ ಹಾಸ್ಯ ಚಿತ್ರಕಲೆ ಮುಂತಾದವುಗಳನ್ನು ದಯವಿಟ್ಟು ಕಳಿಸಿ .  ಇತ್ತೀಚೆಗೆ  ನಿಮ್ಮ ಅಭಿಪ್ರಾಯಗಳು ಕಡಿಮೆಯಾಗಿವೆ. ದಯವಿಟ್ಟು ಬರೆಯಿರಿ .

ಪ್ರತಿಭಾ ಪತ್ರಿಕೆಯ ಪದ್ಯ - ಎ ಎಸ್ ಜಯರಾಂ  

ಪ್ರತೀ ತಿಂಗಳ ಹೊಸ ಬೆಳಕು,  
ಕಥೆ, ಕವನ, ಚಿಂತನೆ, ಚುಟುಕು,  
"ಪ್ರತಿಭಾ" ಇಂಬು ತುಂಬುವ ಒಲುಮೆ!  
ಹಾಸ್ಯ ಹೊಳೆ ಹರಿಸುವ ಮಾಸಿಕ ಚಿಲುಮೆ || 1 ||
ಕಲೆಯ ಕಣಜವೇ ಇಲ್ಲಿ ಹರಿಯುವುದು,  
ಸಂಸ್ಕೃತಿಯು ಮುಂದಕ್ಕೆ ನಡೆಯುವುದು.  
ಸುದ್ದಿಯ ಪರಿಜ್ಞಾನ, ಹೊಸ ತಂತ್ರದ ಜ್ಞಾನ,  
ಪ್ರತಿಯೊಂದು ಪುಟ ಹಬ್ಬದ ಚಂದನ || 2 ||
ಸ್ಪರ್ಧೆಯ ದಾರಿಯಲ್ಲಿ ಸ್ಪೂರ್ತಿ ಸಿಡಿಯಿತು,  
ಗೆದ್ದವರಿಗೆ ಪ್ರತಿತಿಂಗಳು ಪ್ರಶಸ್ತಿ  ಲಭಿಸಿತು.  
ಪ್ರತಿಭಾವಂತರ ಕಿರು ಪರಿಚಯವಾಯಿತು,  
ಪ್ರವಾಸದ ಕಥನದಲ್ಲಿ ಮನಸು ಅರಳಿತು || 3 ||
ಪ್ರತಿಭಾ, ನಮ್ಮ ಕನಸು, ನಮ್ಮ ಸ್ಪೂರ್ತಿ,  
ಎಲ್ಲರೂ ಓದಿ ನಲಿಯಲು ತಿಂಗಳು ಪೂರ್ತಿ
ಪ್ರತಿಭಾ ಜಗಕೆ ತೋರುವುದು  ದೂರದಿಂದಲೇ
ನಿಮ್ಮೆಲ್ಲರ ಪ್ರತಿಭೆ, ಚಿಂತನೆ, ಕವನ, ಕಲೆ  || 4 ||
 "ಪ್ರತಿಭಾ" ಓದುವವರ ಮನಸಿಗೆ ಹೂಹಾರ 
ಉಳಿಯಬೇಡಿ ನೀವು ಸುರ್ಧೆಯಿಂದ ದೂರ
ಇದು ಜಯರಾಮನ ಸುಂದರ ಕಲ್ಪನಾವಿಹಾರ
ಎಲ್ಲರಿಗೂ ಇದು ಕಲೆಯ ಉತ್ಸವದ ದಾರ! || 5||

ವಿಚಾರ - ಕೃತಕ ಬುದ್ದಿಮತ್ತೆ - ಅರ್ಟಿಫಿಶಯಿಯಲ್ ಇಂಟಲಿಜೆನ್ಸ್  (AI)

ಕೃತಕ ಬುದ್ದಿಮತ್ತೆ - ಅರ್ಟಿಫಿಶಯಿಯಲ್ ಇಂಟಲಿಜೆನ್ಸ್  (AI) ಇಂದ ಏನುಬೇಕಾದರೂ ಮಾಡಬಹುದು ಎಂಬುದಕ್ಕೆ ಇದು ಉದಾಹರಣೆ , ಈ ಕೆಳಗಿನ ಲಿಂಕ್ ಒತ್ತಿ ನೋಡಿ.


ನನಗೆ ಕುದುರ ಹತ್ತುವುದಕ್ಕೂ ಬರುವುದಿಲ್ಲ . ಒಂದೇ ಒಂದು ವಾಕ್ಯ ನಾನು ಬರೆದು , ನನ್ನ ಚಿತ್ರ ಕೊಟ್ಟಿದ್ದಕ್ಕೆ , ಈ ರೀತಿಯ ವಿಡಿಯೋ ಬಂದಿದೆ . ಹೀಗೆ ಮಾಡಲು ಫ್ರೀ ಆಗಿರುವ ಅನೇಕ ಅಪ್ ಗಳು ಇವೆ ( ಇದು ಪಿಕ್ಸ್ವರ್ಸ  ಎಂಬುದರಿಂದ ಮಾಡಿರುವುದು )



ಇನ್ನೊಂದು , ನಾನು ದೀಪಾವಳಿಗೆ ದೀಪ ಹಿಡಿದಿರುವುದು ನೂಡಿ !



ಇಂತಹುದರಿಂದ ಅನುಕೂಲವಂತು ಬಹಳ ಇವೆ. ಅನಾನುಕೂಲಗಳೂ ಇವೆ. ನಿಮ್ಮ ಅಭಿಪ್ರಾಯ ತಿಳಿಸಿ 

ಜುಲೈ  ಸಂಚಿಕೆಯ ಬಹುಮಾನ 

ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ , ಅವರು ಅಮೆರಿಕದಿಂದ ಹಿಂತಿರುಗಿದ ನಂತರ , ಜುಲೈ ಸಂಚಿಕೆಯ ಪದಬಂಧದ ಉತ್ತರಕ್ಕೆ ಬಹುಮಾನ ನೀಡಲಾಯಿತು 

ಈಗಲೇ ತಿಳಿಸಿರುವಂತೆ, ಕಳೆದ ಸಂಚಿಕೆಯಲ್ಲಿ ಯಾರಿಗೂ ಬಹುಮಾನವಿಲ್ಲ.

ಪದಬಂಧ - ಉತ್ತರಗಳು 

ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್ 

 
 

ಶ್ರೀಮತಿ ರಾಜೇಶ್ವರಿ ನಾಗರಾಜ್ 

 
 

ಶ್ರೀಮತಿ ಸೌಮ್ಯ ನಾಗರಾಜ್ 

 
 

ಶ್ರೀ ಆನಂದ್ ಎಸ್ ಬಿ  

 
 

ಶ್ರೀಮತಿ ವಿದ್ಯಾ ಎಸ್ 

 
 

ಶ್ರೀಮತಿ ರೋಹಿಣಿ ನಾಗರಾಜ್  ಮತ್ತು  ಶ್ರೀ ನಾಗರಾಜ್  ಎಂ ಹೆಚ್ 

ಎಲ್ಲರೂ ಬರೆದ ಉತ್ತರಗಳಲ್ಲಿ ಕೆಲವು ತಪ್ಪುಗಳನ್ನು ಮಾತ್ರ ತೋರಿಸಿದ್ದೇನೆ. ಉತ್ತರಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು .

ಕಳೆದಬಾರಿ ಯಾರಿಗೂ  ಬಹುಮಾನ ಕೊಡದ ಕಾರಣ , ಈ ಸಂಚಿಕೆಯಲ್ಲಿ ಇಬ್ಬರು ಸರಿ ಉತ್ತರ ಬರೆದವರಿಗೆ ಬಹುಮಾನ ನೀಡಲಾಗಿದೆ. 

ಬಹುಮನ ಪಡೆದವರು : 1) ಶ್ರೀಮತಿ ಸೌಮ್ಯ ನಾಗರಾಜ್  ಮತ್ತು 2) ಶ್ರೀಮತಿ ವಿದ್ಯಾ ಎಸ್. ಈಬ್ಬರಿಗೂ ಅಭಿನಂದನೆಗಳು 

 ಈ ಸಂಚಿಕೆಯ ಬಹುಮಾನಿತ  ಸ್ಪರ್ಧೆ 

 ಕನ್ನಡ ರಾಜ್ಯೋತ್ಸವ ಬಂದಿದೆ. ಈ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯದಬಗ್ಗೆ ಒಂದು ಸಣ್ಣ ಸ್ಪರ್ಧೆ. ನೀವು ನಮ್ಮ ರಾಜ್ಯ ಮತ್ತು ನಮ್ಮ ಭಾಷೆಯ ಬಗ್ಗೆ 10 ಸಾಲುಗಳು ಬರೆಯಬೇಕು. 

ನಿಯಮಗಳು:

1. ಮೊದಲ 5 ಸಾಲುಗಳಲ್ಲಿ ಒಂದೂ  ಒತ್ತಕ್ಷರವಿರಬಾರದು , ಕೊಂಬು,ದೀರ್ಗ,  ಸೊನ್ನೆ  ಎಲ್ಲವೂ ಇರಬಹುದು (ಅರ್ಕಾವತ್ತನ್ನು ಸಹ ಒತ್ತಕ್ಷರವೆಂದು ಪರಿಗಣಿಸಲಾಗುವುದು).

2. ನಂತರದ ಐದು ಸಾಲುಗಳಲ್ಲಿ ಆದಷ್ಟು ಹೆಚ್ಚು ಒತ್ತಕ್ಷರಗಳಿರಬೇಕು.

3.ಬರೆದದ್ದನ್ನೇ ಮತ್ತೆ ಬರೆಯಬಾರದು.

4.ಎಲ್ಲ ಸಾಲುಗಳು ನಮ್ಮ ರಾಜ್ಯ ಮತ್ತು ಕನ್ನಡ ಭಾಷೆಗೆ ಸಂಬಂಧಪಟ್ಟರಬೇಕು. ಪರಭಾಷಾ ಪದ ಬಳಸಬಾರದು. ಕನ್ನಡ ಪದಗಳೇ  ಇರಬೇಕು.

ಪ್ರತಿ ವಾಕ್ಯಕ್ಕೂ ಒಂದು ಎರಡು ಮೂರು ಎಂದು ನಂಬರ್ , ಹಾಕಿ 10 ಸಾಲುಗಳನ್ನು ಬರೆದು ಕಳಿಸಿ.  ಕಳುಹಿಸಲು ಕೊನೆಯ ದಿನಾಂಕ ನವಂಬರ್ 25 ನೇ ತಾರೀಕು. ದಯವಿಟ್ಟು ಎಲ್ಲರೂ ಪ್ರಯತ್ನಿಸಿ. 

 ವ್ಯಕ್ತಿ ಪರಿಚಯ - ಡಾ|| ನಾಗೇಶ್ . ಎಲ್. 

ಡಾ. ನಾಗೇಶ್. ಎಲ್. ವೃತ್ತಿಯಲ್ಲಿ ದಂತ ಶಸ್ತ್ರಚಿಕಿತ್ಸಕರು. ಬೆಂಗಳೂರಿನ ಸರ್ಕಾರಿ ದಂತ ಕಾಲೇಜಿನಿಂದ ಬಿಡಿಎಸ್ ಮತ್ತು ನಂತರ ಎಂಡಿಎಸ್ ಮುಗಿಸಿದರು. ದಾವಣಗೆರೆಯ ಬಾಪೂಜಿ ದಂತ ಕಾಲೇಜಿನಲ್ಲಿ ಸುಮಾರು 17 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2023 ರಲ್ಲಿ ದಯಾನಂದ ಸಾಗರ್ ದಂತ ವಿಜ್ಞಾನ ಕಾಲೇಜಿನಿಂದ ನಿವೃತ್ತ ಪ್ರಾಧ್ಯಾಪಕರಾಗಿ ನಿವೃತ್ತರಾದರು. ವಿಶ್ವ ಆರೋಗ್ಯ ಸಂಸ್ಥೆಯಿಂದ ಎರಡು ಬಾರಿ ತಜ್ಞರ ಸಮಿತಿ ಸದಸ್ಯರಾಗಿ ಅವರನ್ನು ಆಹ್ವಾನಿಸಲಾಯಿತು. ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 146 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಥಿಯೊಸಾಫಿಕಲ್ ಸೊಸೈಟಿಯ (ಬ್ರಹ್ಮ ಜ್ಞಾನ ಸಮಾಜ) ಸದಸ್ಯರಾಗಿದ್ದಾರೆ ಮತ್ತು ರಾಷ್ಟ್ರೀಯ ಭಾಷಣಕಾರರಾಗಿದ್ದಾರೆ. ಅವರು ನಮ್ಮ ರಾಜ್ಯದಾದ್ಯಂತ 'ಥಿಯೊಸಾಫಿಕಲ್ ಸೊಸೈಟಿ'ಯ ವಿವಿಧ ಶಾಖೆಗಳಲ್ಲಿ ನಿಯಮಿತ ಭಾಷಣಕಾರರಾಗಿದ್ದಾರೆ ಮತ್ತು ಜಯನಗರದ 'ಧ್ಯಾನ ಮತ್ತು ಅಧ್ಯಯನ ವಲಯ'ದಲ್ಲಿ ನಿಯಮಿತವಾಗಿ ಉಪನ್ಯಾಸಗಳನ್ನು ನೀಡುತ್ತಾರೆ. ಅವರು ಜಯನಗರದ 'ಶಂಕರ ಕೃಪಾ ಮಂಡಳಿ' ಮೂಲಕ ಹಲವಾರು ಸಂದರ್ಭಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಡಿವಿಜಿ ಬರೆದ ಮಂಕುತಿಮ್ಮನ ಕಗ್ಗದ ಆಧ್ಯಾತ್ಮಿಕ ಸಾರದಿಂದ ಅವರು ತುಂಬಾ ಆಕರ್ಷಿತರಾಗಿದ್ದಾರೆ. ಅವರು 'ಜೀವನಪರ್ಯಂತ ಕಲಿಕೆ' ಎಂಬ ಪರಿಕಲ್ಪನೆಯನ್ನು ಬಲವಾಗಿ ನಂಬುತ್ತಾರೆ. ಬಹುಶಃ 300 ಕ್ಕೂ ಹೆಚ್ಚು ಉಪನ್ಯಾಸಗಳಲ್ಲಿ ನಾನು ಕಗ್ಗವನ್ನು ಬಳಸಿದ್ದೇನೆ ಮತ್ತು ನಿರ್ದಿಷ್ಟ ಸಂದರ್ಭದಲ್ಲಿ ಅದರ ಅರ್ಥವನ್ನು ವಿವರಿಸಿದ್ದೇನೆ. ಮಂಕುತಿಮ್ಮನ ಕಗ್ಗದಲ್ಲಿ ನೇರವಾಗಿ ಅವರು  ಸುಮಾರು 100 ಉಪನ್ಯಾಸಗಳನ್ನು ನೀಡಿರಬಹುದು. ಇತ್ತೀಚಿನ ಒಂದು ಉಪನ್ಯಾಸ ನಮ್ಮ ಬಡಾವಣೆಯಲ್ಲಿ ನಡೆಯಿತು. ಅದರವಿವರ , ಇದೇ ಸಂಚಿಕೆಯ "ಸುದ್ದಿಗಳು " ವಿಭಾಗದಲ್ಲಿ ಇದೆ .

ಇವರು ಇದೇ ರೀತಿ , ಇನ್ನೂ ಹೆಚ್ಚು ಜನಸೇವೆ ಮಾಡಲಿ ಎಂದು ನಾವೆಲ್ಲರೂ ಹಾರೈಸೋಣ. 

ಪದಬಂಧ - ಡಾ|| ಎ ಎಸ್ ಚಂದ್ರಶೇಖರ ರಾವ್ ಅವರಿಂದ. 

 

A

  1. ಅತಿಯಾದ ಮಾತು , ಅಧಿಕ ಪ್ರಸಂಗ 

  2. ಗಾಳಿ ಬೀಸುವಿಕೆ, ಅಲುಗಾಡು,ಚಲನೆ 

  3. ದರ, ಬೆಲೆ, ಕಿಮ್ಮತ್ತು.

B

  1. ಚಿರ ಸ್ಥಾಯಿ, ಮುಪ್ಪು ಸಾವು ಇಲ್ಲದಿರುವಿಕೆ, ಶಾಶ್ವತ  

  2. ಗಾಳಿ ಬೀಸುವ ಸಾಧನ , ಬೀಸಣಿಗೆ 

  3. ಆನೆ, ಗಜ .

ಕಥೆ - ಸಂಬಂಧಗಳು 

ಲೇಖಕರು : ಡಾ|| ಎ ಎಸ್ ಚಂದ್ರಶೇಖರ ರಾವ್ 

ಮಾನವೀಯ ಮೌಲ್ಯಗಳಲ್ಲಿ ಸಂಬಂಧಗಳು ಮುಖ್ಯವಾದುದು. ಇತ್ತೀಚೆಗೆ ಸಂಬಂಧಗಳು ಮೌಲ್ಯ ಕಳೆದುಕೊಂಡಿವೆ ಎನಿಸುತ್ತದೆ. ಸಂಬಂಧಗಳು ಗಟ್ಟಿಯಾಗಿರಬೇಕಾದರೆ ಪರಸ್ಪರ ತ್ಯಾಗ ಮನೋಭಾವ ಇರಬೇಕು. ಸಂಬಂಧಗಳು ಗಂಡ-ಹೆಂಡತಿ, ಸ್ನೇಹಿತರು, ಪ್ರೇಮಿಗಳು, ತಂದೆ, ತಾಯಿ, ಮಕ್ಕಳು, ಸೋದರರು, ಸೋದರಿಯರು ಇತ್ಯಾದಿ ಇರಬಹುದು. ಸಂಬಂಧಗಳ ವಿಚಾರದಲ್ಲಿ ಎರಡು ಘಟನೆಗಳನ್ನು ಉದಾಹರಣೆಯಾಗಿ ತಿಳಿಸಬಹುದು.

ಆ ಬಡಾವಣೆಯಲ್ಲಿ ದೊಡ್ಡದೊಂದು ಪಾರ್ಕ್ ಇದೆ. ಅಲ್ಲಿ ಅನೇಕ ಹಿರಿಯ ನಾಗರಿಕರು, ಇತರರು ನಡೆದಾಡುವುದಕ್ಕೆ ಪ್ರತಿದಿನ ಬೆಳಗ್ಗೆ ಅಥವ ಸಂಜೆ ಬರುತ್ತಿರುತ್ತಾರೆ. ಅಲ್ಲಲ್ಲಿ ಕುಳಿತುಕೊಳ್ಳುವುದಕ್ಕೆ ಕಲ್ಲು ಬೆಂಚುಗಳನ್ನು ಹಾಕಿಸಿದ್ದಾರೆ. ಮೂಲೆಯಲ್ಲಿ ಹೆಚ್ಚು ಜನ ಓಡಾಡದೆ ಇರುವ ಜಾಗದಲ್ಲಿ ಇಬ್ಬರು ತರುಣ ತರುಣಿಯರು ಕುಳಿತು ಮಾತನಾಡಿಕೊಳ್ಳುತ್ತಿದ್ದರು. ಆ ಹುಡುಗಿಯನ್ನು ಎಲ್ಲೋ ನೋಡಿದ ನೆನಪು - ಪ್ರಾಯಶಃ ಪಕ್ಕದ ಬಡಾವಣೆಯವಳಿರಬಹುದಂತ ಈ ಹಿರಿಯ ನಾಗರಿಕರು ಊಹಿಸಿಕೊಂಡರು. ಈಗೆ ೨-೩ ದಿನದಿಂದ ಹುಡುಗಿಯೊಬ್ಬಳೇ ಅಲ್ಲಿ ಕುಳಿತು ಕಾಯುತ್ತಿದ್ದಳು. ಮೂರನೆಯ ದಿನ ಅವಳ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದಳು. ಹಿರಿಯರಿಗೆ ಅಯಾಚಿತವಾಗಿ ಕೇಳಿಸುತ್ತಿತ್ತು 'ಈ ರೀತಿ ನನ್ನನ್ನು ನಡುನೀರಿನಲ್ಲಿ ಕೈ ಬಿಟ್ಟರೆ ನನ್ನಗತಿ ಏನು? ನಿನ್ನ ಪ್ರೀತಿ ಎಲ್ಲಿ ಹೋಯಿತು. ನಾನು ನಾಳೆ ನಾಡಿದ್ದು ಇಲ್ಲಿ ಕಾಯುತ್ತೇನೆ. ನೀನು ಬರದಿದ್ದರೆ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ". ಈ ರೀತಿಯ ಮಾತುಗಳನ್ನು ಕೇಳಿ ಆ ಹಿರಿಯರು ಸ್ವಲ್ಪ ವಿಚಲಿತರಾದರು. ಆದರೆ ಅನೇಕ ನಾಗರಿಕರಂತೆ ಇನ್ನೊಬ್ಬರ ಉಸಾಬರಿ ನಮಗೇಕೆ? ಎಂತ ಸುಮ್ಮನಿದ್ದರು. ಮೂರನೆಯ ದಿನ ಪಕ್ಕದ ಬಡಾವಣೆಯ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳೆಂಬ ಸುದ್ದಿ ಬಂತು. ಈ ರೀತಿಯ ಪ್ರೇಮಿಗಳ ಸಂಬಂಧ ಕೊನೆಯಲ್ಲಿ ದುರಂತದಲ್ಲಿ ಪರ್ಯವಸಾನವಾಯಿತು. ನಾವು ಗೆಳೆಯರನ್ನು ಆರಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಒಳ್ಳೆಯ ಗೆಳೆಯರನ್ನೇ ಆರಿಸಬೇಕು.

ಇನ್ನೊಂದು ಘಟನೆ : ಇಬ್ಬರು ಇಂಜಿನಿಯರ್‌ಗಳು ವಿಜಾತಿಯವರು ಪ್ರೇಮಿಸಿ ಮದುವೆಯಾಗಿದ್ದರು. ಇಬ್ಬರಿಗೂ ಬೇರೆ ಬೇರೆ ಕಾರುಗಳಿದ್ದುವು. ಒಂದು ದಿನ ಆಕೆಗೆ ಕಾರು ಓಡಿಸುವಾಗ ಅಪಘಾತವಾಯಿತು. ಜೀವ ಉಳಿದದ್ದೇ ಹೆಚ್ಚು. ಆದರೆ ಕುತ್ತಿಗೆ ಮೂಳೆ - ನರಮಂಡಲಕ್ಕೆ ಏಟು ಬಿದ್ದು ಆಕೆಗೆ ಎರಡು ಕಾಲುಗಳ ನಿಯಂತ್ರಣ ತಪ್ಪಿತು. ತಳ್ಳುವ ಗಾಡಿ (ವೀಲ್ ಚೇರ್) ಉಪಯೋಗಿಸಿ ಆಫೀಸಿಗೆ ಹೋಗುವಂತಾಯಿತು. ಗಂಡ ಮೊದಲಿಗಿಂತ ಹೆಚ್ಚು ಪ್ರೀತಿ ತೋರಿಸಿ ಆಕೆಗೆ ಆಸರೆಯಾಗಿ ನಿಂತು ಎಲ್ಲ ರೀತಿಯ ಸಹಾಯ ಮಾಡಿ ತಾನೂ ಆಫೀಸಿಗೆ ಹೋಗಿ ತುಂಬ ಶ್ರೀಮಂತನಾದ. ಸುಮಾರು ೨೫ ವರ್ಷ ಈ ರೀತಿ ಸಂಸಾರ ಮಾಡಿ ಕೊಂಡಿದ್ದರು. ಇಬ್ಬರು ಪ್ರೀತಿಯ ಮಕ್ಕಳು. ವಿದ್ಯಾಭ್ಯಾಸ ಮುಗಿಸಿದ್ದಾರೆ. ಇಂತಹ ಸಂಬಂಧಗಳಿಗೆ ಬೆಲೆ ಇದೆ.

ಈಗಿನ ಕಾಲದಲ್ಲಿ ಸಂಬಂಧಗಳ ಮೌಲ್ಯ ನಶಿಸುತ್ತಿದೆ. ಕ್ಷುಲ್ಲಕ ಕಾರಣಗಳಿಂದ ವಿವಾಹ ವಿಚ್ಛೇದನ ಪಡೆಯುವುದು. ತಂದೆ ತಾಯಿಯರನ್ನು ಅಗಲಿ ವಿದೇಶಕ್ಕೆ ಹೋಗಿ ಕಲ್ಲೇ ನೆಲೆಸುವುದು ಇಂತಹವು ಬಹಳಷ್ಟು ಇವೆ. ಅಣ್ಣ ತಮ್ಮಂದಿರ ಜಗಳ ಆಸ್ತಿಗಾಗಿ ಇದು ಪುರಾತನ ಕಾಲದಿಂದ ಇದ್ದು ಈಗ ಈ ಬಗೆಯ ಪ್ರಕರಣಗಳು ಹೆಚ್ಚಾಗಿದೆ.

ಈ ರೀತಿ ಸಂಬಂಧಗಳು ಗಟ್ಟಿಯಾಗಿ ಇರಬೇಕಾದರೆ ಏನು ಮಾಡಬೇಕು? ಇದು ಗಂಭೀರವಾದ ಸಮಸ್ಯೆ. ವಿಚಾರ ಮಾಡುವಂತಹದ್ದು.

 ಕವನಗಳು 

ಮೂರೂ ಕವನಗಳನ್ನು ಬರೆದವರು: ಶ್ರೀಮತಿ ಸುಧಾ ಶ್ರೀನಾಥ್.

1) ಹೆಮ್ಮೆಯ ಕುಡಿ 

ಕಂದಮ್ಮ ಹುಟ್ಟಿದ ಗಳಿಗೆಯಲೀ..

ಆನಂದಭಾಷ್ಪ ತೇಲಿ ಕoಗಳಲಿ,

ಕನಸುಗಳ ಅಂಗಳದಿ ನನಸು ತೇಲುತಲಿ..

ಅವಳು ನಗು — ಧೈರ್ಯದ ಭಾಷೆ,

ಕೈಲಿ ಕಲೆ, ಮನದಿ ಕರುಣೆ,

ಯಶಸ್ಸು ಅವಳ ಅಲಂಕಾರ ...

ಸತ್ಯ ಸುಂದರ ತರುಣಿ...

ಮಾತೃ ಮನದ ಮುಡಿಪು, 

ಪಿತೃ ಕನಸಿನ ಹೊಳಪು,

ಮಗಳೆ ನೀನೆ — ನಮ್ಮೆಲ್ಲರ ಹುಮ್ಮಸ್ಸಿನ ಹುರುಪು..

2)ತೀಕ್ಷ್ಣ  ಭಾವ

ಕಣ್ಣ ರೆಪ್ಪೆಗೆ, 

ಕಣ್ಣೀರಿನ ಹನಿಗಳೇ ಭಾರ,

ದುಃಖತಪ್ತ ಮನಕೆ,

ಭಾವಗಳೇ ಆಧಾರ...

ನೋವು ನಿರಾಕಾರ...

ಅದನು ಗೆಲ್ಲುವ ಛಲವೊಂದೇ ಸಾಕಾರ...

3) ಗೆಳತಿ

ಸ್ಪೂರ್ತಿಯ ಸೆಲೆಯೆ !

ಭರವಸೆಯ ಕುಡಿಯೇ 

ನಿನಗಿದು ಸರಿಯೇ ??

 ಹೃದಯದ ಪಾರದರ್ಶಕದಲ್ಲಿ

ಸೆರೆಹಿಡಿದ ಸುಂದರ ಗಳಿಗೆಗಳ

ಮಧುರ ಕ್ಷಣಗಳ ಕಣ್ಣಂಚಿನಲ್ಲಿ ತೇಲಿಸಿ ,

ತುಟಿಯಂಚಿನಲ್ಲಿ ತಿಳಿ ನಗುವ ತರುವೆ

 ಗೆಳತಿ, ನೀನ್ಯಾರು ನಾ ಅರಿಯೆ 

"ನೆನಪು" ಎಂಬ ಮೋಹಕ ಹೆಸರ ನಿನಗೆ ನೀಡುವೆ

ಮನುಜ ಕುಲಕ್ಕೆ ನೀನೊಂದು ವರವೇ????

 ಲೇಖನ : ಗೋವರ್ಧನ ಪೂಜೆ 

ಪ್ರಕೃತಿ, ಭಕ್ತಿ ಮತ್ತು ಪರಿಪಾಲನೆಯ ಸಂಯೋಗ

ಲೇಖಕರು : ಶ್ರೀ ಸುರೇಶ್ ಎಸ್.

ಪ್ರಕೃತಿಯ ಆರಾಧನೆಗೆ ಶ್ರದ್ಧೆಯ ಹಬ್ಬ – ಗೋವರ್ಧನ ಪೂಜೆ! ದೀಪಾವಳಿಯ ನಂತರದ ದಿನವನ್ನು ಗೋವರ್ಧನ ಪೂಜೆ ಅಥವಾ ಅನ್ನಕೂಟ ಎಂದು ಆಚರಿಸುವ ಸಂಪ್ರದಾಯ ಶತಮಾನಗಳಿಂದ ಜೀವಂತವಾಗಿದೆ. ಕೃಷಿ ಆಧಾರಿತ ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಲ್ಲ, ಪ್ರಕೃತಿಯ ಗೌರವದ ಪ್ರತೀಕವಾಗಿದೆ.

ಕಥೆಯ ಮೂಲ ಮತ್ತು ಸಾರ

ಭಾಗವತ ಪುರಾಣದ ಪ್ರಕಾರ, ಶ್ರೀಕೃಷ್ಣನು ವೃಂದಾವನದ ಜನರಿಗೆ ಇಂದ್ರನ ಯಜ್ಞವನ್ನು ನಿಲ್ಲಿಸಿ, ಗೋವರ್ಧನ ಪರ್ವತವನ್ನು ಪೂಜಿಸಲು ತಿಳಿಸಿದರು. ಅವರ ಸಂದೇಶ ಸರಳವಾಗಿತ್ತು — “ಪ್ರಕೃತಿಯು ನಮಗೆ ಜೀವದ ಮೂಲ. ಅದನ್ನು ಗೌರವಿಸುವುದು ದೇವರ ಪೂಜೆಯಷ್ಟೇ ಪವಿತ್ರ.” ಕೋಪಗೊಂಡ ಇಂದ್ರನು ಮಹಾ ಮಳೆ ಸುರಿಸಿದಾಗ, ಕೃಷ್ಣನು ತನ್ನ ಚಿಕ್ಕ ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಗ್ರಾಮಸ್ಥರನ್ನು ರಕ್ಷಿಸಿದರು. ಈ ಘಟನೆಯು ನಮಗೆ ಪಾಠ ಕೊಡುತ್ತದೆ — ಮಾನವನು ಪ್ರಕೃತಿಯ ಶಕ್ತಿಯನ್ನು ಶತ್ರುವಾಗಿ ನೋಡುವುದಿಲ್ಲ, ಬದಲಿಗೆ ಅದರೊಂದಿಗೆ ಸಹಜ ಜೀವನ ನಡೆಸಬೇಕು.

ಆಧ್ಯಾತ್ಮಿಕ ತತ್ತ್ವ

ಗೋವರ್ಧನ ಪೂಜೆಯ ತತ್ವವು “ಸರ್ವ ಜೀವಗಳಲ್ಲಿ ದೇವತ್ವವನ್ನು ಕಾಣುವುದು” ಎಂಬ ಭಗವದ್ಗೀತೆಯ ಸಂದೇಶವನ್ನು ನೆನಪಿಸುತ್ತದೆ:

“ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ” – ಭಗವದ್ಗೀತೆ

ನಂದಗೋಪರು, ಗೋಮಾತೆ, ಧರೆಮಾತೆ, ಗಿರಿಧಾರಿಯುಳ್ಳ ಪ್ರಕೃತಿಯ ಎಲ್ಲಾ ಅಂಶಗಳು ದೇವರ ವಿಭಿನ್ನ ರೂಪಗಳು. ಭಕ್ತನು ಈ ದಿನ ಅಣ್ಣಕೂಟವನ್ನು ತಯಾರಿಸಿ ನಾನಾ ವಿಧದ ಅನ್ನಭಕ್ಷ್ಯಗಳನ್ನು ದೇವರಿಗೆ ಸಮರ್ಪಿಸುತ್ತಾನೆ – ಇದು ಅನ್ನ ದಾನವೇ ಮಹಾ ದಾನ ಎಂಬ ಭಾರತೀಯ ಧರ್ಮದ ಜೀವಂತ ಪ್ರತಿರೂಪ.

ಪರಿಸರದ ಪಾಠ

ಇಂದಿನ ದಿನಗಳಲ್ಲಿ ಈ ಪೂಜೆಯು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಪ್ರಾಸಕ್ತಿಯಾಗಿದೆ. ಕೃಷ್ಣನು ಮಳೆ, ಮಣ್ಣು, ಪರ್ವತ, ಗೋಮಾತೆ, ನೀರು – ಈ ಐದು ಪ್ರಾಕೃತಿಕ ಅಂಶಗಳ ಪರಸ್ಪರ ಸಂಬಂಧವನ್ನು ಜನರಿಗೆ ತಿಳಿಸಿದರು. ಗೋವರ್ಧನ ಪೂಜೆ ನಮಗೆ ಸ್ಮರಿಸುತ್ತದೆ —

“ಪ್ರಕೃತಿಯ ಆರಾಧನೆ ದೇವರ ಆರಾಧನೆಗೂ ಸಮ.”

2025ರ ಪರಿಸರ ಸಂಕಟಗಳ ನಡುವೆ, ಗೋವರ್ಧನ ಪೂಜೆ ನಮಗೆ ಸರಳ ಜೀವನ – ಸಹಜ ಬದುಕು ಎಂಬ ಪಾಠವನ್ನು ಪುನಃ ನೆನಪಿಸುತ್ತದೆ. ಸಸ್ಯಾರೋಪಣೆ, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಗ – ಇವೇ ಇಂದಿನ ಕಾಲದ ನಿಜವಾದ ಪೂಜೆಗಳು.

ಸಾಮಾಜಿಕ ಅರ್ಥ

ಗೋವರ್ಧನ ಪೂಜೆಯ ಪ್ರಮುಖ ಭಾಗವಾದ ಅನ್ನಕೂಟ ಸಮಾನತೆಯ ಉತ್ಸವ. ಶ್ರೀಮಂತ-ಬಡ ಎಂಬ ಬೇಧವಿಲ್ಲದೆ ಎಲ್ಲರೂ ಒಂದೇ ಅನ್ನವನ್ನು ಸೇವಿಸುತ್ತಾರೆ. ಇದು ಸಾಮಾಜಿಕ ಸಹಭಾಗಿತ್ವ ಮತ್ತು ದಾನ ಧರ್ಮದ ಸಾರ್ಥಕ ಅಭಿವ್ಯಕ್ತಿ.

ಅಂತಿಮ ಚಿಂತನೆ

ಭಗವಾನ್ ಶ್ರೀಕೃಷ್ಣನ ಗೋವರ್ಧನ ಲೀಲೆ ನಮಗೆ ತೋರಿಸುತ್ತದೆ —

“ದೇವರು ಪ್ರಕೃತಿಯೊಳಗಿದ್ದಾನೆ; ಪ್ರಕೃತಿಯ ಪೋಷಣೆ ದೇವರ ಸೇವೆ.”

ಭಕ್ತಿ – ಬಾಳು – ಭೂಮಿ — ಈ ಮೂರು ಶಬ್ದಗಳು ಗೋವರ್ಧನ ಪೂಜೆಯ ಜೀವಾಳ. ಭೂಮಿಯು ಉಳಿದರೆ ಭಕ್ತಿ ಉಳಿಯುತ್ತದೆ; ಭಕ್ತಿ ಉಳಿದರೆ ಜೀವನ ಶಾಶ್ವತವಾಗುತ್ತದೆ. ಪ್ರಕೃತಿಯು ದೇವರ ರೂಪ, ಅದರ ಪೋಷಣೆ ಮಾನವನ ಧರ್ಮ.

ಗೋಮಾತೆ ಸಂರಕ್ಷಣೆಯ ಶ್ಲೋಕ

“ಗೋರ್ಮಹೇಶ್ವರಃ ಪ್ರಥಮೋ ದೇವೋ ಗೋಪಾಲಃ ಸತತಃ ಶ್ರುತಃ |

ಯಸ್ಯ ಶ್ರೇಯೋ ಭವತಿ ಗೋವರ್ಧನಂ ತಂ ಪೂಜ್ಯತಾಮ್ ||”

ಅರ್ಥ: “ಗೋಮಾತೆಯೇ ಮಹೇಶ್ವರನಾದ ದೇವರಲ್ಲಿ ಮೊದಲ ಸ್ಥಾನ ಹೊಂದಿರುವವರು; ಗೋವರ್ಧನವನ್ನು ಪೂಜಿಸುವವನ ಶ್ರೇಯಸ್ಸು ಮಹದಾಗಿದೆ. ಗೋಮಾತೆಯ ಸೇವೆ ಹಾಗೂ ರಕ್ಷಣೆ ದೇವರನ್ನು ಪೂಜಿಸುವುದಕ್ಕೆ ಸಮಾನ.”

 ಚಿತ್ರಕಲೆ - ಕಿರು ಪರಿಚಯ ಸಹಿತ 

ಎಲ್ಲಾ ಚಿತ್ರ ಹಾಗೂ  ಕಿರು ಲೇಖನ ಬರೆದವರು :ಶ್ರೀ ಕೆ ವಿ ಜಯರಾಂ 

1) ಶ್ರೀ ಡಿ ವಿ ಗುಂಡಪ್ಪನವರು 

ಪತ್ರಕರ್ತ, ಕವಿ, ತತ್ವಜ್ಞಾನಿ, ವಿದ್ವಾಂಸರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಅವರಿಗೆ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಸಿಗದಿದ್ದರೂ, 1974 ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಅವರ ಅತ್ಯಂತ ಪ್ರಸಿದ್ಧ ಕೃತಿ 'ಮಂಕು ತಿಮ್ನನ ಕಗ್ಗ' - ಇದನ್ನು ಕನ್ನಡದಲ್ಲಿ ಭಗವದ್ಗೀತೆ ಎಂದು ಕರೆಯಲಾಗುತ್ತದೆ.

2) ಶ್ರೀ ಆಲ್ಬರ್ಟ್ ಐನ್ಸ್ಟೈನ್ 

ಶ್ರೀ ಕೆ ವಿ ಜಯರಾಂ ಅವರದೇ ಬರಹದಲ್ಲಿ : 

ಇದು ನಾನು ಬರೆದ  ಭಾವಚಿತ್ರ, ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದ ಮತ್ತು ನಮಗೆ ಎಂದಿಗೂ ಅರ್ಥವಾಗದ ಪ್ರಸಿದ್ಧ ಸಮೀಕರಣ E = mc2 ಅನ್ನು ನೀಡಿದ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್. ಅವರು ಶಾಂತಿಪ್ರಿಯರಾಗಿದ್ದರು ಮತ್ತು ಪರಮಾಣು ಬಾಂಬ್ ಅನ್ನು ಆಯುಧವಾಗಿ ಬಳಸುವುದನ್ನು ಬೆಂಬಲಿಸಲಿಲ್ಲ. ಅವರನ್ನು 160 ಐಕ್ಯೂ ಹೊಂದಿರುವ ಪ್ರತಿಭೆ ಎಂದು ಪರಿಗಣಿಸಲಾಗಿತ್ತು. ಆಧುನಿಕ ಜಗತ್ತಿನ ಪ್ರತಿಯೊಬ್ಬ ದಂಪತಿಗಳ ಆಲೋಚನೆಯೆಂದರೆ, 5 ನೇ ವಯಸ್ಸಿನಿಂದ ಪ್ರಾರಂಭಿಸಿ, ತಮ್ಮ ಮಗುವಿಗೆ ಅತ್ಯುನ್ನತ ಅಂಕಗಳನ್ನು ಪಡೆಯಲು ತರಬೇತಿ ನೀಡುವುದು, ಐನ್‌ಸ್ಟೈನ್ ಅನ್ನು ಮಾದರಿ ಅಥವಾ ಮಾನದಂಡವಾಗಿ ಇರಿಸುವುದು. ವಾಸ್ತವವಾಗಿ ಐನ್‌ಸ್ಟೈನ್ ಕಂಠಪಾಠ ಕಲಿಯುವುದನ್ನು ಇಷ್ಟಪಡಲಿಲ್ಲ ಮತ್ತು 15 ನೇ ವಯಸ್ಸಿನಲ್ಲಿ ಸರ್ವಾಧಿಕಾರಿ ಶೈಲಿಯ ಬೋಧನೆಯಿಂದಾಗಿ ಜರ್ಮನಿಯಲ್ಲಿ ಶಾಲೆಯನ್ನು ತೊರೆದರು ಮತ್ತು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು.

3) ಸುಂದರ ದಾಸವಳದ ಹೂ ಗಿಡ 

 

4) ಹೂ ದಾನಿ 

 ಸುದ್ದಿಗಳು

ಉಮೇಶ ಶೆಟ್ಟಿ ಅವರ ಮನೆಯ ಎದಿರಿನ ಉದ್ಯಾನವನದಲ್ಲಿ , ನಮ್ಮ ಸಂಘದ ಸದಸ್ಯೆ, ಶ್ರೀಮತಿ ಸಂಧ್ಯಾ ಜಯರಾಂ ಅವರು ಭಾವಗೀತೆಗಳ ಸುಂದರ ಕಾರ್ಯಕ್ರಮ ಏರ್ಪಡಿಸಿದ್ದರು .

 
 

ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ದಿನಾಂಕ 24.10.2025ರಂದು, ದೇವರ ಪ್ರಾಣ ಪ್ರತಿಷ್ಠಾಪನಾ ದಿನಕ್ಕೆ ಅನುಗುಣವಾಗಿ 26ನೇ ವಾರ್ಷಿಕೋತ್ಸವದ ಸಂಬಂಧ ನೆರವೇರಿಸಲಾದ ಸಹಸ್ತ್ರ ಮೋದಕ ಹೋಮದ ದೃಶ್ಯಾವಳಿಗಳು 



 
 

ನಮ್ಮ ಬಡಾವಣೆಯ ಸ್ವಾತಿ ದಂತಚಿಕಿತ್ಸಾಲಯದ ಕಟ್ಟಡದಲ್ಲಿ , ಮಂಕುತಿಮ್ಮನ ಕಗ್ಗ ದ ಬಗ್ಗೆ,  ಉಪನ್ಯಾಸ ಏರ್ಪಡಿಸಲಾಗಿತ್ತು . ಮಾತನಾಡಿದವರು : ಡಾ|| ನಾಗೇಶ್ ಎಲ್ . 

ನಿಮಗಾಗಿ ಅದರ ಲಿಂಕ್ :


ನಮ್ಮ ಬಡಾವಣೆಯ ಉದ್ಯಾನವನದಲ್ಲಿ , ವಿಧಾನ ಸಭಾ ಸದಸ್ಯ , ಮಾನ್ಯ  ಶ್ರೀ ಎಂ ಕೃಷ್ಣಪ್ಪ ಅವರು, ನಮ್ಮ ಬಡಾವಣೆಗೆ ,ಬಿಳಿಯ ಎಲ್ಈಡಿ  ದೀಪಗಳ ಅಳವಡಿಕೆ ಕಾರ್ಯವನ್ನು ಉದ್ಘಾಟಿಸಿದರು . 


ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ . ಧನ್ಯವಾದಗಳು.


Comments

Popular posts from this blog

ಪ್ರತಿಭಾ ಪತ್ರಿಕೆ - ಡಿಸಂಬರ್ 2024

Magazine for talents - December 2024

ಸೆಪ್ಟಂಬರ್ 2025- ಪ್ರತಿಭಾ ಪತ್ರಿಕೆ