ಪ್ರತಿಭಾ ಪತ್ರಿಕೆ - ಜುಲೈ 2025
ಸಂಪಾದಕರ ಬರಹ
ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, "ಜಯರಾಮನ ಜೋಕು" ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ .
ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ ಬಹುಮಾನ ಮಾತ್ರ ತುಂಬಾ ಚೆನ್ನಾಗಿರುವ ಒಂದೇ ಒಂದು ಕವನಕ್ಕೆ ಕೊಡಲಾಗಿದೆ.
ಹೋದ ಸಂಚಿಕೆಯ ಚಿತ್ರಗಳನ್ನು ಬಿಡಿಸಿದ್ದ,ಅನೇಕ ಮಕ್ಕಳಿಗೆ ಆನ್ಲೈನ್ ಮೂಲಕ ಬಹುಮಾನಗಳನ್ನ ಕಳಿಸಲಾಗಿದೆ. ಅನೇಕರು ತುಂಬಾ ದೂರದಲ್ಲಿ ವೈಟ್ಫೀಲ್ಡ್ ಮುಂತಾದ ಕಡೆ ಇದ್ದು, ಬಹುಮಾನ ತೆಗೆದುಕೊಳ್ಳಲು ಬರುವುದು ಕಷ್ಟವಾಗಿದ್ದರಿಂದ ಈ ರೀತಿ ಮಾಡಲಾಗಿದೆ. ಎಲ್ಲರ ಭಾವಚಿತ್ರ ಹಾಗೂ ಹೆಸರುಗಳನ್ನು ಪ್ರಕಟಿಸಲಾಗಿದೆ.
ಮುಖ್ಯ ಸೂಚನೆ : ಎಲ್ಲಾ ಸ್ಪರ್ಧೆಯ ಉತ್ತರಗಳನ್ನೂ ನನ್ನ ಇಮೇಲ್ jayarambox@gmail.com ಗೆ ಕಳಿಸಿ . ಹಾಗೆ ಮಾಡಲು ಬಾರದಿದ್ದವರು ವಾಟ್ಸಪ್ ಗೆ ಕಳಿಸಿರಿ. ಟೈಪ್ ಮಾಡಲು ಬರುವವರೆಲ್ಲ ಟೈಪ್ ಮಾಡಿ ಕಳಿಸಿದರೆ ನನಗೆ ಬಹಳ ಅನುಕೂಲ . ಇಲ್ಲಿ ಭಾಗವಹಿಸಿರುವ ಎಲ್ಲರಿಗಿಂತ ಹಿರಿಯರಾದ ( 87 ವರ್ಷ ) ನನ್ನ ಮಾವನವರಾದ ಎಸ್ ವಿಠ್ಠಲ ರಾವ್ ಅವರು , ಎಲ್ಲವನ್ನೂ ಟೈಪ್ ಮಾಡಿ ಕಳಿಸುತ್ತಾರೆ ! ಅವರಿಗೆ ಧನ್ಯವಾದಗಳು
ಪತ್ರಿಕೆಯನ್ನು ಪೂರ್ಣವಾಗಿ ಓದಿ ನಿಮ್ಮ ಅಭಿಪ್ರಾಯಗಳನ್ನು ಬರೆದು ನನಗೆ ಇಮೇಲ್ ಅಥವಾ ವಾಟ್ಸ್ ಅಪ್ ಗೆ ಕಳಿಸಿದರೆ, ಅದರಂತೆ ಪತ್ರಿಕೆಯನ್ನು ಮಾರ್ಪಾಡು ಮಾಡಲಾಗುವುದು ಹಾಗೂ ನಿಮ್ಮ ಅಭಿಪ್ರಾಯಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ನಿಮ್ಮೆಲ್ಲರ ಸಹಾಯಕ್ಕಾಗಿ ಧನ್ಯವಾದಗಳು.
ಸೂಚನೆ : ಈ ಸಂಚಿಕೆಯ ಹಾಸ್ಯಗಳ ಹಾಗೂ ನನ್ನ ಲೇಖನಗಳ ಅನೇಕ ಚಿತ್ರಗಳನ್ನು AI ನಿಂದ, ಈ ಸಂದರ್ಭಕ್ಕಾಗಿಯೇ ಮಾಡಿದ್ದೇನೆ - ಜಯರಾಂ ಎ ಎಸ್ - ಸಂಪಾದಕರು

ನೀವೂ ವಿಶೇಷ ವ್ಯಕ್ತಿಯೇ ?
ಪ್ರತಿಭಾ ಪತ್ರಿಕೆಯಲ್ಲಿ ಪ್ರತಿ ತಿಂಗಳು ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ಬರೆಯುತ್ತಿರುವುದು ನಿಮಗೆಲ್ಲ ತಿಳಿದೇ ಇದೆ ನೀವೂ ಒಬ್ಬರು ಸಾಧಕರಾಗಿದ್ದರೆ, ನಿಮ್ಮ ವಿಷಯವನ್ನು ತುಂಬಾ ಸಂಕ್ಷಿಪ್ತವಾಗಿ (ಸುಮಾರು ಒಂದು ಪುಟದಷ್ಟು) ಈ ಕೆಳಕಂಡ ವಿಷಯಗಳ ಬಗ್ಗೆ ಎರಡೆರಡು ಸಾಲು ಬರೆದು ನನಗೆ ಕಳಿಸಿದರೆ, ನಿಮ್ಮನ್ನು ಈ ವಿಶೇಷ ವ್ಯಕ್ತಿ ಅಂಕಣದಲ್ಲಿ ಪರಿಗಣಿಸಬಹುದೇ ಎಂದು ನಾನು ಪರಿಶೀಲಿಸಲು ಅನುಕೂಲವಾಗುತ್ತದೆ
ವಿಷಯಗಳು:
1) ನಿಮ್ಮ ಹವ್ಯಾಸಗಳು
2) ನಿಮ್ಮ ಸಾಧನೆಗಳು
3) ನಿಮಗೆ ದೊರೆತ ಸನ್ಮಾನ ಪುರಸ್ಕಾರಗಳು
4) ಇನ್ನಿತರ ವಿಶೇಷ ವಿಚಾರಗಳು.
ದಯವಿಟ್ಟು ಬರೆದು ಕಳುಹಿಸಿ.
ವಿಚಾರ -ಭಾಗ-2.
ಓತಿಕ್ಯಾತದ ಸ್ವಾರಸ್ಯಕರ ಘಟನೆ- ಜಯರಾಂ ಎ ಎಸ್
ಇದು, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಸಹೋದ್ಯೋಗಿಯೊಬ್ಬರ ಜೀವನದಲ್ಲಿ ನಡೆದ ಘಟನೆ.
ಅವರು ಬಹಳ ಮೃದು ಸ್ವಭಾವದವರಾಗಿದ್ದರು ಯಾರಿಗೂ ಮನಸ್ಸು ನೋಯಿಸದೆ ಕೆಲಸ ಮಾಡಬೇಕೆಂದುಕೊಂಡವರು ಪ್ರಾಣಿಗಳನ್ನೂ ಸಹ ಹಿಂಸೆ ಮಾಡದೆ ಮನಸ್ಸು ನೋಯಿಸದೆ ಇರಬೇಕೆಂಬ ಆಸೆ ಅವರದು. ಸದಾ ನಗುಮುಖದಿಂದ ಇರುತ್ತಿದ್ದರು .
ಒಂದು ದಿನ ಕಾಲೇಜಿಗೆ ಬಂದಾಗ ಸ್ವಲ್ಪ ಸಪ್ಪೆ ಮುಖ ಹಾಕಿಕೊಂಡು ಕೂತಿದ್ದರಿಂದ, ನಾನು "ಏನಾಯ್ತು " ಎಂದು ಕೇಳಿದೆ. ಆಗ ಅವರು ಹೇಳಿದ ಘಟನೆ ಈ ಕೆಳಗೆ ಕೊಟ್ಟಿದ್ದೇನೆ
ಅವರು ಹೇಳಿದರು:
" ನಾನು ನಿನ್ನೆ ಭಾನುವಾರ ನಮ್ಮ ಹಳ್ಳಿಗೆ ಹೋಗಿದ್ದೆ. ಅಲ್ಲಿ ವಾಕಿಂಗ್ ಮಾಡುತ್ತಿದ್ದಾಗ, ದನಗಳು ನೀರು ಕುಡಿಯಲೆಂದು ಕಟ್ಟಿದ್ದ ಒಂದು ತೊಟ್ಟಿ ಹತ್ತಿರ ಹೋಗುತ್ತಿದ್ದೆ. ಆಗ ಒಂದು ಓದಿಕ್ಯಾತ ಆ ತೊಟ್ಟಿಯ ನೀರಿನಲ್ಲಿ ಬಿದ್ದು, ಪೂರ್ತಿ ಹೊರಬರಲಾಗದೆ ಒದ್ದಾಡುತ್ತಿತ್ತು. ತೊಟ್ಟಿಯಲ್ಲಿ ಮುಕ್ಕಾಲು ಭಾಗ ನೀರಿತ್ತು .ನಾನು ಸುತ್ತಮುತ್ತಲೂ ನೋಡಿ, ಅಲ್ಲೇ ಬಿದ್ದಿದ್ದ ಒಂದು ಸಣ್ಣ ಮರದ ಕೊಂಬೆಯನ್ನು ತೆಗೆದುಕೊಂಡು, ನಿಧಾನವಾಗಿ ಆ ಓತಿಕ್ಯಾತವನ್ನು ತೊಟ್ಟಿಯ ಕಟ್ಟೆ ಮೇಲೆ ಬಿಟ್ಟೆ .ಅದು ಮೆಲ್ಲನೆ ನಡೆಯಲು ಶುರು ಮಾಡಿ, ನನ್ನ ಕಡೆ ನೋಡಿತು. ನನಗೆ ಬಹಳ ಖುಷಿಯಾಯಿತು. ಒಂದು ಪ್ರಾಣಿಯನ್ನು ರಕ್ಷಣೆ ಮಾಡಿದ್ದೇನೆ ಎಂದುಕೊಂಡೆ ಅದೇ ಖುಷಿಯಲ್ಲಿ ಮನೆ ಕಡೆ ನಡೆದೆ. ಆದರೆ ನಾಕು ಹೆಜ್ಜೆ ಹೋದಮೇಲೆ ಓತಿಕ್ಯಾತ ಏನು ಮಾಡುತ್ತಿದೆ ಎಂದು ಹಿಂತುರುಗಿ ನೋಡುವ ಆಸೆಯಾಯಿತು.
ಹಿಂತಿರುಗಿ ನೋಡಿದೆ .ಒಂದು ಕಾಗೆ ಬಂದು , ಓತಿಕ್ಯಾತವನ್ನು ಕಚ್ಚಿಕೊಂಡು ಹಾರಿಹೋಯಿತು. ನನಗೆ ಬಹಳ ಬೇಸರವಾಯಿತು" ಎಂದರು
ಅವರು ಹೇಳಿದ್ದೂ ಕೇಳಿ ನನ್ನ ತಲೆಯಲ್ಲಿ ಅನೇಕ ಯೋಚನೆಗಳು ಬಂದವು.
-ಅವರು ಓತಿಕ್ಯಾತವನ್ನು ಎತ್ತದೆ ಇದ್ದಿದ್ದರೆ, ಅದೇ ಯಾವಾಗಲೋ ಕಷ್ಟಪಟ್ಟು ಹೊರಬಂದು, ಕಾಗೆಯಿಂದ ತಪ್ಪಿಸಿಕೊಳ್ಳುತ್ತಿತ್ತೇ?
- ಅವರು ಅದನ್ನು ಎತ್ತಿ, ತೆಗೆದುಕೊಂಡು ಹೋಗಿ ಯಾವುದಾದರೂ ದೂರ, ಕಾಗೆಗೆ ಕಾಣದ ಜಾಗದಲ್ಲಿ ಬಿಡಬೇಕಿತ್ತೇ?
- ಅವರು ಹಿಂತಿರುಗಿ ನೋಡದೆ ಮನೆಗೆ ಹೋಗಿದ್ದಿದ್ದರೆ, ಈ ವಿಚಾರವೇ ಅವರಿಗೆ ತಿಳಿಯುತ್ತಿರಲಿಲ್ಲ. ಅವರು ಹಿಂತಿರುಗಿ ನೋಡಿದ್ದೇ ತಪ್ಪೇ?
- ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ, ಕೆಲಸ ಮಾಡುವುದು ಮಾತ್ರ ನಮ್ಮ ಅಧಿಕಾರ ಫಲಾಫಲಗಳು ದೇವರಿಗೆ ಬಿಟ್ಟಿದ್ದು ಎಂದು ಸುಮ್ಮನಿರಬೇಕೇ?
- ಪ್ರಕೃತಿಯಲ್ಲಿ ಒಂದು ಪ್ರಾಣಿ ಇನ್ನೊಂದರ ಆಹಾರವಾಗುವುದು ಸಹಜ ಧರ್ಮ ಎಂದು ಕೊಳ್ಳಬೇಕೆ?
- ಇದರ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳದಿರುವುದೇ ಸರಿಯೇ? "
ಈ ವಿಷಯದ ಬಗ್ಗೆ, ನಿಮ್ಮ ಅಭಿಪ್ರಾಯವನ್ನು 8-10 ಸಾಲಿನಲ್ಲಿ ಬರೆದು ಕಳಿಸಿ.
ಮೇ ಸಂಚಿಕೆಯ ಬಹುಮಾನ ವಿಜೇತರು
10 ರಿಂದ 16 ವರ್ಷದ ವಿಭಾಗದಲ್ಲಿ ಬಹುಮಾನ : ಆದಿತ್ಯ
ಅಭಿನಂದನೆಗಳು
10 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಹುಮಾನ :
ಪಾರ್ಥ ಯಾದವ್ ಎಸ್
ಅಭಿನಂದನೆಗಳು
ಉಳಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ. ಈ ಬಹುಮಾನಗಳನ್ನು ನನ್ನ ತಾಯಿ , ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣ ರಾವ್ ಅವರು ಕೊಟ್ಟಿದ್ದಾರೆ . ಅವರಿಗೆ ವಿಶೇಷ ಧನ್ಯವಾದಗಳು.
ದ್ಯುತಿ ಶಿರೀಶ್
ಅಥರ್ವ ಎಸ್

ಅಮೂಲ್ಯ

ನಿಶ್ಚಯ್ ಪಿ ಎಂ

ವಚನಾ ಡಿ ಎಂ

ರಿದ್ದಿ ಯಾದವ್

ಅವ್ನಿ

ಅನಘ

Comments
Post a Comment